ಉಡುಪಿ: ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಆರೋಪದಡಿ ವಶಕ್ಕೆ ಪಡೆದುಕೊಂಡಿದ್ದ ವ್ಯಕ್ತಿ ಜಿಲ್ಲೆಯ ಬ್ರಹ್ಮಾವರ ಠಾಣೆಯಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೇರಳ ಮೂಲದ ಬಿಜು ಮೋಹನ್(44) ಮೃತ ವ್ಯಕ್ತಿ. ಕೊಚ್ಚಿನ್ ಶಿಪ್ ಯಾರ್ಡ್ನಲ್ಲಿ ಮೃತ ಬಿಜು ಕಾರ್ಮಿಕನಾಗಿದ್ದ.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ಈ ಕುರಿತು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹೀಗಾಗಿ ಆರೋಪಿಯನ್ನು ತಂದು ಠಾಣೆಯಲ್ಲಿ ಇರಿಸಿದ್ದರು. ಮುಂಜಾನೆ ಟಾಯ್ಲೆಟ್ನಲ್ಲಿ ಆರೋಪಿ ಕುಸಿದು ಬಿದ್ದಿದ್ದಾರೆ.
ಕೂಡಲೇ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಠಾಣೆಗೆ ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಭೇಟಿ ನೀಡಿದ್ದಾರೆ.
ಪ್ರಕರಣ ಸಂಬಂಧ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಪ್ರತಿಕ್ರಿಯಿಸಿದ್ದು, ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಆರೋಪದಡಿ ದೂರು ನೀಡಿದ್ದರು.
ಹೀಗಾಗಿ ಆರೋಪಿಯನ್ನು ಕರೆತಂದು ರಾತ್ರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಮಹಿಳಾ ಪೊಲೀಸ್ ಸಿಬ್ಬಂದಿ 3.45 ಗಂಟೆಗೆ ಸೆಲ್ ಗಮನಿಸಿದಾಗ ಗೋಡೆಗೆ ತಲೆ ತಾಗಿಸಿ ಆರೋಪಿ ಬಿಜು ಮೋಹನ್ ಕುಸಿದು ಬಿದ್ದಿದ್ದ. ಕೂಡಲೇ ಪೊಲೀಸ್ ಠಾಣಾಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಎಸ್ಪಿ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಸೂಚನೆ ನೀಡಿದ್ದಾರೆ.
ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುವಾಗಲೇ ಆತ ಮೃತಪಟ್ಟಿದ್ದ. ಡೆಂಗ್ಯೂ ಜ್ವರ ಸೇರಿದಂತೆ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಈತ ಚಿಕಿತ್ಸೆ ಪಡೆದಿರುವ ಮಾಹಿತಿ ಇದೆ.
ಈಗಾಗಲೇ ಪ್ರಾಥಮಿಕ ತನಿಖೆ ಮಾಡಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ಇಂತಹ ಘಟನೆ ನಡೆದಾಗ ಪ್ರಕರಣ ಸಿಐಡಿಗೆ ಹೋಗುತ್ತೆ ಎಂದಿದ್ದಾರೆ.
ಬಿಜು ಮೋಹನ್ ಅವರ ಕುಟುಂಬಸ್ಥರು ಬಂದ ಬಳಿಕ ಹೇಳಿಕೆ ಪಡೆದುಕೊಳ್ಳಲಾಗುತ್ತೆ. ಆ ಬಳಿಕ ಪ್ರಕರಣವನ್ನ ಸಿಐಡಿಗೆ ಹಸ್ತಾಂತರ ಮಾಡಲಾಗುತ್ತೆ. ಸಿಐಡಿ ಮುಂದಿನ ತನಿಖೆ ನಡೆಸುತ್ತಾರೆ. ಮರಣೋತ್ತರ ಪರೀಕ್ಷೆ ಅನುಮತಿಯನ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮೂಲಕ ಮಾಡಲಾಗುತ್ತೆ. ಆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.