ಪುತ್ತೂರು:ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರು ಸ್ಥಾಪಿಸಿದ, ಶತಮಾನವನ್ನು ಪೂರೈಸಿರುವ ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ನೂತನ ವಿಟ್ಲ ಶಾಖೆ ನ.14ರಂದು ಉದ್ಘಾಟನೆಗೊಳ್ಳಲಿದೆ ಎಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಟ್ಲದ ಎಂಪೈರ್ ಮಾಲ್‌ನ ಪ್ರಥಮ ಮಹಡಿಯಲ್ಲಿ ಶಾಖೆ ಉದ್ಘಾಟನೆಗೊಳ್ಳಲಿದ್ದು,ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ.ಭದ್ರತಾ ಕೋಶವನ್ನು ವಿಧಾನಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಉದ್ಘಾಟಿಸಲಿದ್ದಾರೆ.ಮಾಜಿ ಶಾಸಕ ಸಂಜೀವ ಮಠಂದೂರು ಅವರು ಗಣಕ ಯಂತ್ರ ಉದ್ಘಾಟಿಸಲಿದ್ದಾರೆ.ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಪ್ರಥಮ ಠೇವಣಿ ಪತ್ರ ಹಸ್ತಾಂತರಿಸಲಿದ್ದಾರೆ.ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾಗಿರುವ ವಿಟ್ಲ ಅರಮನೆಯ ಬಂಗಾರು ಅರಸು, ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಉತ್ತಮ ಪ್ರಗತಿ ಸಾಧಿಸಿದ ಬ್ಯಾಂಕ್: ಸಹಕಾರಿ ತತ್ವದಲ್ಲಿ ಪ್ರಾರಂಭಿಸಲ್ಪಟ್ಟ ಬ್ಯಾಂಕ್ ಈಗ ಸಹಕಾರಿ ತತ್ವದೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದೆ.ಪ್ರಸ್ತುತ ಬ್ಯಾಂಕ್‌ನಲ್ಲಿ 9532 ಮಂದಿ ಸದಸ್ಯರಿದ್ದು ವರ್ಷದಿಂದ ವರ್ಷಕ್ಕೆ ಸದಸ್ಯರ ಸಂಖ್ಯೆ ಮತ್ತು ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ.ಬದಲಾದ ಸನ್ನಿವೇಶಕ್ಕೆ ಬ್ಯಾಂಕ್ ಸಜ್ಜುಗೊಳಿಸುವ ಮತ್ತು ಡಿಜಿಟಲೀಕರಣ ಹಾಗೂ ಹೊಸ ಶಾಖೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡಿಕೊಂಡಿದ್ದೆವು.ಬ್ಯಾಂಕಿಂಗ್‌ನಲ್ಲಿ ೩೮ ವರ್ಷ ಅನುಭವ ಇರುವ ಹಾಗೂ ತೆರಿಗೆ, ಬ್ಯಾಂಕಿಂಗ್ ಮತ್ತು ಆಡಳಿತದಲ್ಲಿ ತಜ್ಞರಾಗಿರುವ ಬಿ.ಶೇಖರ್ ಶೆಟ್ಟಿಯವರನ್ನು ನೇಮಕ ಮಾಡಿ ಅವರಿಗೆ ಬ್ಯಾಂಕ್‌ನ ಅಭಿವೃದ್ಧಿಯ ದೃಷ್ಟಿಯಿಂದ ಹಲವು ಗುರಿಗಳನ್ನು ನೀಡಲಾಗಿತ್ತು.ನಮ್ಮ ಗುರಿಗಳನ್ನು ಅವರು ಪೂರ್ಣ ಮಟ್ಟದಲ್ಲಿ ಸಾಧಿಸಿದ್ದಾರೆ ಎಂದು ಕಿಶೋರ್ ಕೊಳತ್ತಾಯ ಹೇಳಿದರು.
ಬ್ಯಾಂಕ್‌ನ ಪ್ರಮುಖ ಸಾಧನೆಗಳು: ಬ್ಯಾಂಕ್ ರಿಸರ್ವ್ ಬ್ಯಾಂಕಿನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಹಾಗು ಅನುಸರಣಾ ವರದಿಯನ್ನು ಸಲ್ಲಿಸಲಾಗಿದೆ.ಕೋರ್ ಬ್ಯಾಂಕಿಂಗ್ ಅಳವಡಿಸಲಾಗಿದೆ.ಹೆಚ್ಚಿನ ತೆರಿಗೆ ವ್ಯವಸ್ಥೆ ಸಮರ್ಪಕಗೊಳಿಸಲಾಗಿದೆ.ಬ್ಯಾಂಕಿನಲ್ಲಿ 15 ಕೆ.ವಿ ಸೋಲಾರ್ ಗ್ರಿಡ್ ಅಳವಡಿಸಲಾಗಿದೆ.ಬ್ಯಾಂಕಿನ ಡಿಜಿಟಲೀಕರಣದತ್ತ ಸಿದ್ಧತೆ ಸಾಗಿದೆ.ಸದಸ್ಯರಿಗೆ ಶೇ.12 ಡಿವಿಡೆಂಡ್ ಮತ್ತು ಸಭೆಗೆ ಹಾಜರಾದವರಿಗೆ ಉತ್ತಮ ಕೊಡುಗೆ ನೀಡಿದೆ.ಸಿಬ್ಬಂದಿಗಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿ ಅವರಿಗೆ ಹಲವು ಕಾರ್ಯಾಗಾರ ನಡೆಸಿzವೆ.ಕಳೆದ ಆರ್ಥಿಕ ವರ್ಷದಲ್ಲಿ ನಿವ್ವಳ ಅನುತ್ಪಾದಕ ಆಸ್ತಿಯನ್ನು ಶೂನ್ಯಕ್ಕೆ ಇಳಿಸಿದ್ದೆವೆ ಎಂದು ಕಿಶೋರ್ ಕೊಳತ್ತಾಯ ಹೇಳಿದರು.ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ್ ಶೆಣೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಬಲ್ನಾಡು ಉಪಸ್ಥಿತರಿದ್ದರು.