ಕಾರ್ಮಿಕನ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆಯ ಮುಂದಿನ ರಸ್ತೆ ಸಮೀಪ ಮಲಗಿಸಿ ಹೋದ ಘಟನೆಯೊಂದು ಸಾಲ್ಮರ ಸಮೀಪದ ಕೆರೆಮೂಲೆಯಲ್ಲಿ ನ.16ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಿಧಾನಗೊಳಿಸಿದ್ದನ್ನು ವಿರೋಧಿಸಿ ದಲಿತ ಸಂಘಟನೆಗಳು ಹಾಗೂ ಹಿಂದೂ ಮುಖಂಡರು ಪ್ರತಿಭಟನೆ ನಡೆಸಿ ಪಿಕಪ್ ವಾಹನವನ್ನು ಜಪ್ತಿ ಗೊಳಿಸಲಾಯಿತು.
ಸಾಲ್ಮರ ಕೆರೆಮೂಲೆ ನಿವಾಸಿ ಸಿಮೆಂಟ್ ಸಾರಣೆ ಮೇಸ್ತ್ರೀ ಜೊತೆ ಸಹಾಯಕರಾಗಿ ಹೋಗುತ್ತಿದ್ದ ಕೂಲಿ ಕಾರ್ಮಿಕ, ಪರಿಶಿಷ್ಟ ಜಾತಿಗೆ ಸೇರಿದ ಶಿವಪ್ಪ (69ವ)ರವರು ಮೃತಪಟ್ಟವರು. ತಂದೆ ಶಿವಪ್ಪ ಅವರು ನ.16ರಂದು ಬೆಳಿಗ್ಗೆ ಮನೆಯಲ್ಲಿದ್ದ ಸಂದರ್ಭ ಸಾಲ್ಮರ ತಾವೋ ಇಂಡಸ್ಟ್ರೀಸ್‌ನ ಹೆನ್ರಿ ತಾವ್ರೋ ಅವರು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಧ್ಯಾಹ್ನದ ವೇಳೆ ಅದೇ ಪಿಕಪ್ ವಾಹನದಲ್ಲಿ ಅವರನ್ನು ಕರೆದುಕೊಂಡು ಬಂದು ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ. ಶಿವಪ್ಪವರು ಅದಾಗಲೇ ಮೃತಪಟ್ಟಿದ್ದರು.
ಅಮಾನವೀಯ ಘಟನೆಯನ್ನು ಖಂಡಿಸಿ ಇಂದು ದಲಿತ ಸಂಘಟನೆಗಳು ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದವು.
ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಠಾಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಪೊಲೀಸರು ಹಾಗೂ ದಲಿತ ಸಂಘಟನಾ ಕಾರ್ಯಕರ್ತರ ಜೊತೆ ಸಾಲ್ಮರದ ತಾವ್ರೋ ಮಿಲ್ ಗೆ ತೆರಳಿ ಪೊಲೀಸರು ಗೇಟ್ ತೆರೆದು ಹೆಣ ಸಾಗಿಸಿದ ಪಿಕಪ್ ವಾಹನವನ್ನು ಪೊಲೀಸರು ಜಪ್ತಿ ಮಾಡಿದರು.