ನಟಿ ಕಸ್ತೂರಿ ಶಂಕರ್ ಯಾವಾಗಲೂ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಅವರು ಹೇಳಿದ್ದ ಹೇಳಿಕೆ ಸದ್ಯ ಅವರಿಗೆ ಸಂಕಷ್ಟ ತಂದೊಡ್ಡಿದೆ. ನಟಿ ಕಸ್ತೂರಿ ಶಂಕರ್ ಅವರನ್ನು ಚೆನ್ನೈನ ಎಗ್ಮೋರ್ ಪೊಲೀಸ್ ಠಾಣೆಯ ಪೊಲೀಸರು ಹೈದರಾಬಾದ್‌ನಲ್ಲಿ ಅರೆಸ್ಟ್ ಮಾಡಿದ್ದಾರೆ.
ಕಸ್ತೂರಿ ಶಂಕರ್ ಅವರು ಹೈದರಾಬಾದ್ನ ನರಸಿಂಗಿಯಲ್ಲಿನ ನಿರ್ಮಾಪಕರ ಮನೆಯೊಂದರಲ್ಲಿ ಇರುವಾಗ ಚೆನ್ನೈ ಪೊಲೀಸರು ಆಗಮಿಸಿ ನಟಿಯನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನಟಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ 2 ದಿನದ ನಂತರ ಹೈದರಾಬಾದ್‌ನಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ಇದನ್ನು ದೃಢಪಡಿಸಿದ್ದಾರೆ.
ಪೊಲೀಸರು ಕಸ್ತೂರಿ ಶಂಕರ್ ಬಂಧಿಸಿ ಚೆನ್ನೈಗೆ ಕರೆತಂದ ಬಳಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನವೆಂಬರ್ 3 ರಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಸ್ತೂರಿ ಶಂಕರ್ ಮಾತನಾಡಿ ತೆಲುಗು ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ತೆಲುಗು ಜನರು ಹಲವು ಕಡೆ ಪ್ರಕರಣಗಳನ್ನು ದಾಖಲು ಮಾಡಿದ್ದರು. ಈ ಸಂಬಂಧ ಕೇಸ್ ಕೋರ್ಟ್ಗೆ ಹೋಗಿತ್ತು. ಇದನ್ನು ನವೆಂಬರ್ 14ರಂದು ವಿಚಾರಣೆ ಮಾಡಿದ್ದ ಮದ್ರಾಸ್ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿ ಬಂಧನಕ್ಕೆ ಆದೇಶಿಸಿತ್ತು. ಹೀಗಾಗಿ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೋರ್ಟ್ ಬಂಧನಕ್ಕೆ ಸೂಚಿಸಿದ ಮೇಲೆ ನಟಿ ಕಸ್ತೂರಿ ಶಂಕರ್ ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅಲ್ಲದೇ ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ್ದರು. ಭಾಷಣದ ನಂತರ ವಿವಾದ ಆದ ಮೇಲೆ ರಾಜಕೀಯಕ್ಕಾಗಿ ಕೆಲವರು ಹೀಗೆ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಆದರೆ ಇದು ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ಹೇಳಿಕೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನ ಎಂದು ರಾಜ್ಯ ಸರ್ಕಾರ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಕೋರ್ಟ್ಗೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ಆಕೆಗೆ ಜಾಮೀನು ಸಿಕ್ಕಿರಲಿಲ್ಲ ಎಂದು ತಿಳಿದಿದೆ.



























