ಮಂಗಳೂರು: ಒಂದೇ ಕಾಲೇಜಿನ ವಿದ್ಯಾರ್ಥಿಗಳು ಮೋಜು ಮಸ್ತಿಗೆಂದು ಹೋಗಿ ಸಾವಿನ ಮನೆ ಕದ ತಟ್ಟಿದ್ದಾರೆ. ವೀಕೆಂಡ್ ಮೂಡ್ನಲ್ಲಿ ಮಂಗಳೂರಿಗೆ ಹೋದವರು ಸ್ವಿಮ್ಮಿಂಗ್ ಫೂಲ್ನಲ್ಲಿ ಪ್ರಾಣ ಬಿಟ್ಟಿದ್ದಾರೆ.
ಮಂಗಳೂರಿನ ಉಚ್ಚಿಲ ಖಾಸಗಿ ಬೀಚ್ ರೆಸಾರ್ಟ್ನ ಈಜುಕೊಳದಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ನಿಶಿತಾ, ಪಾರ್ವತಿ, ಕೀರ್ತನಾ ಮೈಸೂರು ಮೂಲದವರು.
ಮೃತ ಮೂವರು ಕೂಡ ಮೈಸೂರಿನ ಜೆಎಸ್ಸ್ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು 10 ಗಂಟೆಗೆ ಈಜುಕೊಳಕ್ಕೆ ಇಳಿದಿದ್ದರು. ಒಂದು ಬದಿ ಹೆಚ್ಚು ಆಳ ಇಲ್ಲದ ಕಡೆ ನೀರಿಗಿಳಿದಿದ್ದರು. ಈ ವೇಳೆ ಒಬ್ಬಳು ಸ್ನೇಹಿತೆ ಮಧ್ಯದ ಆಳವಾದ ಜಾಗಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಆಗ ಅವಳನ್ನು ರಕ್ಷಿಸಲು ಮತ್ತೊಬ್ಬಳು ಹೋಗಿದ್ದು ಅವಳು ಕೂಡ ನೀರಿನಲ್ಲಿ ಮುಳುಗಿದ್ದಾಳೆ. ಬಳಿಕ ರಕ್ಷಣೆಗೆ ತೆರಳಿದ ಮೂರನೇಯವಳು ಕೂಡ ಈಜಲು ಬಾರದೇ ಸಾವನ್ನಪ್ಪಿದ್ದಾಳೆ. ಈ ಸಂದರ್ಭ ಬೊಬ್ಬೆ ಹೊಡೆದು ಕೂಗಾಡಿದ್ರೂ ಯಾರೂ ರಕ್ಷಣೆಗೆ ಬಂದಿರಲಿಲ್ಲ. ಮಧ್ಯಕ್ಕೆ ಹೋದಂತೆ ಕಾಲಿಗೆ ತಳ ಸಿಗದೆ ರಕ್ಷಣೆಗಾಗಿ ಒದ್ದಾಡಿದ್ದಾರೆ.
ಅಂತಿಮವಾಗಿ ಸಾಕಷ್ಟು ನೀರು ಕುಡಿದು ಸ್ಥಳದಲ್ಲೇ ಮೂವರು ಕೊನೆಯುಸಿರೆಳೆದಿದ್ದಾರೆ. ಬೆ.10.30ಕ್ಕೆ ಸಿಬ್ಬಂದಿ ಗಮನಿಸಿದಾಗ ಮೂವರು ಮುಳುಗಿದ್ದು ಪತ್ತೆಯಾಗಿತ್ತು. ಈಜುಕೊಳದ ಬಳಿ ಸೆಕ್ಯೂರಿಟಿ ಇಲ್ಲದ ಕಾರಣ ಸಾವಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೆಸಾರ್ಟ್ನಲ್ಲಿ ಅನೇಕ ಸಮಸ್ಯೆಗಳು ಕಾಣಿಸಿವೆ. ರೆಸಾರ್ಟ್ನಲ್ಲಿ ನಿಯಮ ಪಾಲನೇ ಮಾಡದಿರೋದೇ ಮೂರು ಜೀವಗಳ ಹರಣಕ್ಕೆ ಕಾರಣ ಅನ್ನೋದು ಗೊತ್ತಾಗಿದೆ.
ಸದ್ಯ ಸಾಯಿ ರಾಮ್ ರೆಸಾರ್ಟ್ ಮಾಲೀಕ ಮನೋಹರ್ ಪುತ್ರನ್ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ರೆಸಾರ್ಟ್ಗೆ ಭೇಟಿ ನೀಡಿದ ಎ.ಸಿ ಹರ್ಷವರ್ಧನ್ ರೆಸಾರ್ಟ್ಗೆ ಬೀಗ ಹಾಕಿಸಿದ್ದಾರೆ.

ರೆಸಾರ್ಟ್ನಲ್ಲಿ ಏಳು ಜನ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಹುಡುಗಿಯರು ನೀರಲ್ಲಿ ಜೀವಕ್ಕಾಗಿ ಚೀರಾಡುವಾಗ ಈ ಸಿಬ್ಬಂದಿ ಎಲ್ಲಿ ಹೋಗಿದ್ರು? ಯಾರಿಗೂ ಇವರ ಕೂಗಾಟ ಕೇಳಿಸಿಲ್ವಾ? ಅನ್ನೋದೆ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸ್ತಿದ್ದಾರೆ.
ಮಕ್ಕಳ ಸಾವಿನ ಸುದ್ದಿ ಕೇಳಿ ಹೆತ್ತವರಿಗೆ ಅಕ್ಷರಶಃ ಬರ ಸಿಡಿಲೇ ಬಡಿದಿದೆ. ಮಕ್ಕಳನ್ನು ನೆನೆದು ಪೋಷಕರು ಕಣ್ಣೀರು ಹಾಕ್ತಿದ್ದಾರೆ. ಮಕ್ಕಳು ಎಂಜಿನಿಯರ್ ಆಗ್ತಾರೆ ಅಂತ ಕನಸು ಕಂಡಿದ್ದ ಹೆತ್ತವರು ಇದೀಗ ಮಕ್ಕಳೇ ಇಲ್ಲದ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.



























