ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಲ್ಲಿ ನಡೆದಿದೆ.
ರೂಪಾ (29) ಮೃತ ದುರ್ದೈವಿ. 2 ವರ್ಷಗಳ ಹಿಂದೆಯಷ್ಟೇ ಸುರೇಶ್ ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಸುರೇಶ್ ಸಾಸಲು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟಿಂಗ್ ಆಗಿ ಕೆಲಸ ಮಾಡುತ್ತಿದ್ದ.
2 ವರ್ಷಗಳ ಹಿಂದೆ ರೂಪಾ ಕುಟುಂಬದವರು ಸುರೇಶ್‌ನೊಂದಿಗೆ ಮದುವೆ ಮಾಡಿಸಿದ್ದರು. ಮದುವೆ ಸಮಯದಲ್ಲಿ 100 ಗ್ರಾಂ ಒಡವೆ ಸಹ ನೀಡಿದ್ದರು. ಆದ್ರೆ ಸುರೇಶ್ ಕುಟುಂಬಸ್ಥರು ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆ ಹಣವನ್ನು ತೆಗೆದುಕೊಂಡು ಬಾ ಎಂದು ಆಕೆಗೆ ಕಿರುಕುಳ ನೀಡುತ್ತಿದ್ದರು. ಕಿರುಕುಳಕ್ಕೆ ಬೇಸತ್ತ ರೂಪಾ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಸಾವಿಗೂ ಮುನ್ನ ರೂಪಾ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ ನನ್ನ ಸಾವಿಗೆ ಗಂಡ ಸುರೇಶ್, ಮಾವ ನರಸಿಂಹಮೂರ್ತಿ ಅತ್ತೆ ದೇವಮ್ಮ ಕಾರಣ ಎಂದು ಬರೆದಿದ್ದಾರೆ. ಸದ್ಯ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿ ಸುರೇಶ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ತಲೆಮರಿಸಿಕೊಂಡಿರುವ ಸುರೇಶ್ ತಂದೆ ತಾಯಿಗಾಗಿ ಶೋಧ ನಡೆಸಿದ್ದಾರೆ.




























