ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತವಾದ ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಗುರುದೇವ ವಿವಿಧೋzಶ ಸಹಕಾರ ಸಂಘದ ೨೩ನೇ ಶಾಖೆಯು ನ.24ರಂದು ಕುಂಬ್ರದಲ್ಲಿರುವ ಅಕ್ಷಯ್ ಆರ್ಕೆಡ್‌ನ ನೆಲಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ.
2007-08ರಲ್ಲಿ ಬೆಳ್ತಂಗಡಿಯಲ್ಲಿ ಪ್ರಾರಂಭವಾದ ಸಂಘವು ಮೈಸೂರು ಪ್ರಾಂತ್ಯದ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸಂಘದಲ್ಲಿ 42000ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು ರೂ.210ಕೋಟಿ ಠೇವಣಿ, ರೂ.186ಕೋಟಿ ಸಾಲ ಹಂಚಿಕೆ ಹಾಗೂ ರೂ.1350 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸುತ್ತಿದೆ.
ಸಂಘವು ಪ್ರಸ್ತುತ ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿ ಹಾಗೂ ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಯಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಸಿನಮಕ್ಕಿ, ಸಿದ್ದಕಟ್ಟೆ, ಅಜೆಕಾರು, ಹಿರಿಯಡ್ಕ, ಪಡೀಲ್, ಕಬಕ, ಹೊಸ್ಮಾರು ಹಾಗೂ ಪುರುಷರಕಟ್ಟೆಗಳಲ್ಲಿ ಶಾಖೆಗಳನ್ನು ಹೊಂದಿದ್ದು 23ನೇ ಶಾಖೆ ಕುಂಬ್ರದಲ್ಲಿ ಪ್ರಾರಂಭಗೊಳ್ಳುತ್ತಿದ್ದು ಇದು ಪುತ್ತೂರು ತಾಲೂಕಿನ 4ನೇ ಶಾಖೆಯಾಗಿದೆ.
ಕಳೆದ 17 ವರ್ಷಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸಂಘವು ಇನ್ನೂ ಎರಡು ಶಾಖೆಗಳನ್ನು ಪ್ರಾರಂಭಿಸಲಿದ್ದು ಜ.28ರಂದು ವಾಮದಪದವುನಲ್ಲಿ 24ನೇ ಶಾಖೆ ಪ್ರಾರಂಭಗೊಳ್ಳಲಿದೆ.
ಬಂಟ್ವಾಳದ ಸರಪಾಡಿಯ ಮಾವಿನಕಟ್ಟೆಯಲ್ಲಿ 25ನೇ ಶಾಖೆಯು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.
ಸಂಘದ ಉತ್ತಮ ಸೇವೆ ಹಾಗೂ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉತ್ತಮ ಸಹಕಾರ ಸಂಘ ಪ್ರಶಸ್ತಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತ ೭ ವರ್ಷದಿಂದ ಸಾಧನಾ ಪ್ರಶಸ್ತಿ, ಯುವವಾಹಿನಿ ಕೇಂದ್ರ ಸಮಿತಿಯಿಂದ ಸಾಧನಾ ಶ್ರೇಷ್ಠ ಪ್ರಶಸ್ತಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಬ್ರಹ್ಮಶ್ರೀ ಸಹಕಾರ ಸಾಧನಾ ಪ್ರಶಸ್ತಿ ಹಾಗೂ ಯುವವಾಹಿನಿ ಘಟಕದಿಂದ ಸಾಧನಾ ಪ್ರಶಸ್ತಿಗಳು ಲಭಿಸಿದೆ.
ಸಂಘದ ವೈಶಿಷ್ಠ್ಯತೆ ಹಾಗೂ ಸೌಲಭ್ಯಗಳು: ಸಂಘವು ಲೆಕ್ಕಪರಿಶೋಧನೆಯಲ್ಲಿ `ಎ’ ಶ್ರೇಣಿ, ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ, ಕೋರ್ ಬ್ಯಾಂಕಿಂಗ್ ಸೌಲಭ್ಯ, ಎಲ್ಲಾ ಶಾಖೆಗಳಲ್ಲೂ ಸಿ.ಸಿ ಕ್ಯಾಮರಾ ಮತ್ತು ಭದ್ರತಾ ಕೋಡಿಯೊಂದಿಗೆ ಭದ್ರತೆಗೆ ಹೆಚ್ಚು ಪ್ರಾಶಸ್ತ್ಯ, ಕ್ರಿಯಾಶೀಲ ನಿರ್ದೇಶಕರು, ಶೀಘ್ರದಲ್ಲಿ ಸಾಲ ಮಂಜೂರಾತಿ, ಕೃಷಿಯೇತರ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಶೀಘ್ರದಲ್ಲಿ ಚಿನ್ನಾಭರಣ ಸಾಲ, ಇ-ಸ್ಟಾಂಪಿಂಗ್, ಠೇವಣಿಗೆ ಆಕರ್ಷಕ ಬಡ್ಡಿ, ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯ, ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಕೃಷಿಯೇತರ ಸಾಲ ಸೌಲಭ್ಯ, ಹಿರಿಯ ನಾಗರಿಕರಿಗೆ, ಸಂಘ ಸಂಸ್ಥೆಗಳ ಶೇ.0.5 ಹೆಚ್ಚುವರಿ ಬಡ್ಡಿ, ಮಲ್ಟಿಸಿಟಿ ಚೆಕ್, ಡಿಡಿ ಸೌಲಭ್ಯ, ವೆಸ್ಟರ್ನ್ ಯೂನಿಯನ್, ಎಕ್ಸ್‌ಪ್ರೆಸ್ ಮನಿರಿಯಾ ಮನಿ ಟ್ರಾನ್ಸ್‌ಫರ್ ಮೂಲಕ ವಿದೇಶಿ ಹಣ ವರ್ಗಾವಣೆ, ಆಯ್ದ ಶಾಖೆಗಳಲ್ಲಿ ಸೇಫ್ ಲಾಕರ್, ಇಪ್ಕೋ-ಟೋಕಿಯೋ ವಿಮಾ ಸೌಲಭ್ಯ ಹಾಗೂ ಆರ್‌ಟಿಸಿ(ಪಹಣಿ ಪತ್ರ) ಮೊದಲಾದ ಸೌಲಭ್ಯಗಳನ್ನು ಸಂಘದ ಮೂಲಕ ನೀಡಲಾಗುತ್ತಿದೆ ಎಂದರು.
ನೂತನ ಶಾಖಾ ಕಚೇರಿಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಶ್ರೀಗುರುದೇವ ವಿವಿಧೋzಶ ಸಹಕಾರಿ ಸಂಘದ ಅಧ್ಯಕ್ಷ ಎನ್.ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಭದ್ರತಾ ಕೋಶ ಉದ್ಘಾಟಿಸಲಿದ್ದಾರೆ. ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಗಣಕ ಯಂತ್ರವನ್ನು ಉದ್ಘಾಟಿಸಲಿದ್ದಾರೆ.
ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಬಿ ಜಯರಾಮ ರೈ ಉಳಿತಾಯ ಖಾತೆ ಪುಸ್ತಕ ವಿತರಿಸಲಿದ್ದಾರೆ. ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈಕೈಕಾರ, ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಉದ್ಯಮಿಗಳು, ಪಂಚಮಿ ಗ್ರೂಪ್ಸ್‌ನ ಮ್ಹಾಲಕ ಪುರಂದರ ರೈ, ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ, ಕುಂಬ್ರ ವರ್ತಕ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಪರ್ಪುಂಜ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ಹಾಗೂ ಕೆಯ್ಯೂರು ವರ್ತಕ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆ. ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂಘದ ವಿಶೇಷಾಧಿಕಾರಿ ಯಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ತಿಳಿಸಿದ್ದಾರೆ.