ಉಪ್ಪಿನಂಗಡಿ: ಕುಮಾರಧಾರ ನದಿಯ ಸೇತುವೆಯ ಮೇಲೆ ಇರುವ ಹೊಂಡ ಹಾಗೂ ಕೆಸರುಮಯ ರಸ್ತೆಯಿಂದಾಗಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ 34 ನೆಕ್ಕಿಲಾಡಿ ನಿವಾಸಿ ಅಬ್ದುಲ್ ರೆಹೆಮಾನ್ ಯುನಿಕ್ ಅವರು ವಾಹನ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ರಸ್ತೆಯ ಈ ಅವ್ಯವಸ್ಥೆಗೆ ಕಾರಣವಾಗಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆ ಕೆಎನ್ಆರ್ ವಿರುದ್ಧ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ.25ರಂದು ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಅಬ್ದುಲ್ ರೆಹಮಾನ್ ಯುನಿಕ್ ಅವರ ಕೈ, ಕಾಲುಗಳಿಗೆ ಗಾಯಗಳಾಗಿವೆ.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುವ ಅವರು ದೂರಿನಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಂಸ್ಥೆಯಾದ ಕೆಎನ್ಆರ್ ಸಂಸ್ಥೆಯ ವಿರುದ್ದ ಆರೋಪ ಮಾಡಿದ್ದಾರೆ.
‘ಕೆಎನ್ಆರ್ ಸಂಸ್ಥೆಯ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಸಂಚಾರವೆನ್ನುವುದು ಸಂಕಷ್ಟವಾಗಿದೆ. ಇವರು ಯಾವುದೇ ಸರ್ವೀಸ್ ರಸ್ತೆಯ ಕಾಮಗಾರಿಗಳನ್ನು ಪೂರ್ಣಗೊಳಿಸದೇ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಹೊಂಡ- ಗುಂಡಿಗಳಿದ್ದು, ಅದನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ. ಕಾಮಗಾರಿ ಸಂದರ್ಭ ರಸ್ತೆಯಲ್ಲೆಲ್ಲಾ ಮಣ್ಣು ಬೀಳುತ್ತಿದ್ದು, ಧೂಳು ಎದ್ದೇಳಬಾರದೆಂದು ಅದಕ್ಕೆ ನೀರು ಹಾಕುವುದರಿಂದ ರಸ್ತೆ ಕೆಸರುಮಯವಾಗಿ ವಾಹನಗಳು ಸ್ಕಿಡ್ ಆಗುವಂತಾಗಿವೆ. ಇಲ್ಲಿ ನಡೆಯುವ ಅಪಘಾತಗಳಿಗೆ ಕೆಎನ್ಆರ್ ಸಂಸ್ಥೆಯೇ ನೇರ ಹೊಣೆಯಾಗಿದೆ’. – ಅಬ್ದುಲ್ ರೆಹಮಾನ್ ಯುನಿಕ್