ರಾಮನಗರ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದ ಕಾರು ಎದುರು ಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿಗೆ ಗುದ್ದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರು ಪುರುಷರು, ಹಾಗೂ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಬಳಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಘಟನೆ ಸಂಭವಿಸಿದೆ.
ಡೆಲ್ಲಿ ಪಾಸಿಂಗ್ ನಂಬರ್ ಹೊಂದಿರುವ ಹ್ಯೂಂಡಯ್ ಐ ಟೆನ್ ಕಾರು ಹಳೆಯ ಮಾಡೆಲ್ ಆಗಿದ್ದು, ಬೆಂಗಳೂರಿನ ಶಿವಾಜಿನಗರದ ನಿವಾಸಿಗಳಾದ ಲಿಯಾಕತ್ (50), ಅಸ್ಮಾ (38), ನೂರ್ (40) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕುಟುಂಬ, ಸಂಬಂಧಿಕರ ಕಾರ್ಯಕ್ರಮವೊಂದಕ್ಕೆ ತೆರಳುತ್ತಿತ್ತು. ಕಾರು ಡಿವೈಡರ್ಗೆ ಗುದ್ದಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರನ್ನು ಹೊರ ತೆಗೆಯಲು ಹರಸಾಹಸಪಡಬೇಕಾಯಿತು.

ಅಪಘಾತ ಕಾರಣ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ರಾಮನಗರ ಟ್ರಾಫಿಕ್ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆದು ರಾಮನಗರ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.




























