ಗಾಂಧಿನಗರ: ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಹರಿಯಾಣದ 29 ವರ್ಷದ ಸರಣಿ ಹಂತಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಈ ಅತ್ಯಾಚಾರ ಎಸಗುವುದಕ್ಕೂ ಮುನ್ನ ಹಂತಕ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ರೈಲಿನಲ್ಲೇ ನಾಲ್ವರನ್ನು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ನವೆಂಬರ್ 14ರಂದು ಉದ್ವಾಡ ರೈಲು ನಿಲ್ದಾಣದ ಸಮೀಪದ ಹಳಿಯ ಮೇಲೆ ಯುವತಿಯ ಶವ ಪತ್ತೆಯಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಹರಿಯಾಣದ ರೋಹ್ಟಕ್ ಮೂಲದ ರಾಹುಲ್ ಸಿಂಗ್ ಜಾಟ್ ಎಂಬಾತನ್ನ ನವೆಂಬರ್ 24ರಂದು ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಸಂತ್ರಸ್ತೆ ಆ ದಿನ ಟ್ಯೂಷನ್ ಮುಗಿಸಿ ಮನೆಗೆ ಬಂದಾಗ ಹಿಂದಿನಿಂದ ಹಲ್ಲೆ ನಡೆಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಬಳಿಕ ತಿಳಿಸಿದ್ದಾರೆ.
ವಲ್ಸಾದ್ ಎಸ್ಪಿ ಕರಂರಾಜ್ ವಘೇಲಾ ಮಾತನಾಡಿ, ಅಪರಾಧ ನಡೆದ ಸ್ಥಳದಲ್ಲಿ ಹಂತಕ ಬಿಟ್ಟುಹೋಗಿದ್ದ ಟೀ ಶರ್ಟ್ ಮತ್ತು ಬ್ಯಾಗ್ ಪೊಲೀಸರಿಗೆ ಪ್ರಮುಖ ಸಾಕ್ಷ್ಯಗಳಾಗಿತ್ತು. ಅಲ್ಲದೇ ಸಿಟಿಟಿವಿಯಲ್ಲಿ ಆರೋಪಿ ಮುಖಚಹರೆ ಸೆರೆಯಾಗಿತ್ತು. ನಂತರ ಸೂರತ್‌ನ ಲಜ್‌ಪೋರ್ ಸೆಂಟ್ರಲ್ ಜೈಲಿನ ಅಧಿಕಾರಿ ಈತನ್ನ ಗುರುತಿಸಿದರು. ಈ ಹಿಂದೆ ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಹುಲ್ ಇತ್ತೀಚೆಗಷ್ಟೇ ಜೈಲಿನಿಂದ ರಿಲೀಸ್ ಆಗಿದ್ದ. ಭಾನುವಾರ ರಾತ್ರಿ ಸ್ಥಳೀಯ ಮತ್ತು ರೈಲ್ವೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಲ್ಸಾದ್‌ನ ವಾಪಿ ರೈಲು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಹಂತಕನ್ನ ಬಂಧಿಸಲಾಯಿತು ಎಂದು ವಿವರಿಸಿದ್ದಾರೆ.
ಆರೋಪಿ ಜಾಟ್ ಕುರಿತು ಎಸ್ಪಿ ಹಲವು ಸ್ಫೋಟಕ ವಿಚಾರಗಳನ್ನ ತಿಳಿಸಿದ್ದಾರೆ. ಈತ ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತಿದ್ದ, ಒಂದು ಸ್ಥಳದಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಮಹಾರಾಷ್ಟ್ರದ ರೈಲುಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ನಡೆದ ಲೂಟಿ, ಕೊಲೆ ಕೃತ್ಯಗಳನ್ನೂ ಎಸಗಿದ್ದ ಎಂದು ತಿಳಿಸಿದ್ದಾರೆ.
ಜಾಟ್‌ನನ್ನ ಬಂಧನ ಮಾಡುವ ಹಿಂದಿನ ದಿನ ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಲೂಟಿ ಮಾಡಿದ್ದ. ಕಳೆದ ಅಕ್ಟೋಬರ್‌ನಲ್ಲೂ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ನಂತರ ಮಹಾರಾಷ್ಟ್ರದ ಸೋಲಾಪುರ ರೈಲು ನಿಲ್ದಾಣದ ಬಳಿ, ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದ ಬಳಿ ಕತಿಹಾರ್ ಎಕ್ಸ್‌ಪ್ರೆಸ್ ರೈಲು ಹಾಗೂ ಕರ್ನಾಟಕದಲ್ಲಿ ತಲಾ ಒಬ್ಬೊಬ್ಬರನ್ನು ಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.