ಸಹಾಯ ಹಸ್ತ ಲೋಕಸೇವಾ ಟ್ರಸ್ಟ್ (ರಿ.) ನೇತೃತ್ವದಲ್ಲಿ ಕಬಕ ಗ್ರಾಮದ ಕುಂದ್ರುಕೋಟೆಯಲ್ಲಿ ನಿರ್ಮಾಣ ಮಾಡಿರುವ ಸಹಾಯಹಸ್ತ ನೆರಳು ಮನೆಯ ಹಸ್ತಾಂತರ, ಗೌರವಾರ್ಪಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಡಿ. 8 ರಂದು ಬೆಳಿಗ್ಗೆ 11.45ಕ್ಕೆ ರೇವತಿ ಅವರ ನೂತನ ಮನೆ ಅಂಗಳದಲ್ಲಿ ನಡೆಯಲಿದೆ.
ಆಸಕ್ತರ ಸೇವೆಯೇ ಪ್ರಮುಖ ಧ್ಯೇಯ ಎಂಬ ನಿಟ್ಟಿನಲ್ಲಿ ಸಹಾಯಹಸ್ತ ಲೋಕಸೇವಾ ಟ್ರಸ್ಟ್ ತೊಡಗಿಕೊಂಡು, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಸಮರ್ಪಕ ಸೂರಿಲ್ಲದ ರೇವತಿ ಅವರ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಕೊಡುವ ಕಾರ್ಯವನ್ನು ಟ್ರಸ್ಟ್ ಪೂರ್ಣಗೊಳಿಸಿದೆ.
ಅನಾರೋಗ್ಯ ಪೀಡಿತರಿಗೆ ಧನ ಸಹಾಯದ ನೆರವು ನೀಡುವ ಮೂಲಕ ಸಮಾಜಕಾರ್ಯಕ್ಕೆ ಮುಂದಾದ ಸಹಾಯಹಸ್ತ ಲೋಕಸೇವಾ ಟ್ರಸ್ಟ್, 283 ಸೇವಾ ಯೋಜನೆಯ ಮೂಲಕ 78 ಲಕ್ಷ ರೂ.ಗೂ ಮಿಕ್ಕಿ ಧನ ಸಂಗ್ರಹ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಿದೆ. ಕೊರೋನಾ ಸಂದರ್ಭ ಹಲವಾರು ಮಂದಿಗೆ ಕಿಟ್ ವಿತರಣೆ ಮಾಡಿ, ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದೆ. ಇದರೊಂದಿಗೆ ಮನೆ ಕಟ್ಟುವ ಬಡವರಿಗೆ ಸಿಮೆಂಟ್, ಸಿಮೆಂಟ್ ಶೀಟ್ ಸೇರಿದಂತೆ ಸಾಮಗ್ರಿಗಳನ್ನು, ಅಲ್ಲದೇ ಧನ ಸಹಾಯದ ನೆರವನ್ನು ನೀಡಿತು. ಇದೀಗ ಮನೆ ನಿರ್ಮಾಣ ಮಾಡಿ ಕೊಡುವ ಮಹತ್ತರ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು, ಸಮರ್ಥವಾಗಿ ಪೂರ್ಣಗೊಳಿಸಿದೆ. ಇದೀಗ ಆ ಮನೆಯನ್ನು ಫಲಾನುಭವಿ ಕುಟುಂಬಕ್ಕೆ ಹಸ್ತಾಂತರ ಮಾಡುವ ಸಮಾರಂಭ ನಡೆಯಲಿದೆ.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟಿನ ಅರ್ಜುನ್ ಬಂಡರ್ಕಾರ್, ವೈದ್ಯರಾದ ಡಾ. ಸುರೇಶ್ ಪುತ್ತೂರಾಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಪತ್ ಬಾಂಧವ ಈಶ್ವರ್ ಮಲ್ಪೆ, ಪುತ್ತೂರು ನಗರ ಠಾಣಾ ಸಬ್ ಇನ್ಸ್’ಪೆಕ್ಟರ್ ಆಂಜನೇಯ ರೆಡ್ಡಿ, ಸಂಪ್ಯ ಠಾಣಾ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಸುಷ್ಮಾ ಭಂಡಾರಿ, ಮಡವು ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಸ್ಥಾಪಕ ಸಚಿನ್ ಅತಿಥಿಯಾಗಿ ಆಗಮಿಸಲಿದ್ದಾರೆ.
ಇದೇ ಸಂದರ್ಭ ಸಮಾಜ ಸೇವೆಯಲ್ಲಿ ನಿರತರಾಗಿರುವ ಸಂಸ್ಥೆಗಳಿಗೆ ಗೌರವಾರ್ಪಣೆ, ಸಮಾಜ ಸೇವಾ ಸಾಧಕರಾದ ಅರ್ಜುನ್ ಭಂಡರ್ಕಾರ್, ಈಶ್ವರ್ ಮಲ್ಪೆ, ಪ್ರತ್ಯೂಷಾ ಪೂಜಾರಿ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.