ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು ನ. 27 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಾಸಾಗಿರಲಿಲ್ಲ.
ಈ ಬಗ್ಗೆ ವಿನಯ ಅವರಲ್ಲಿ ಸಂದೀಪ್‌ನ ತಾಯಿ ಸರೋಜ ಅವರು ವಿಚಾರಿದಾಗ. ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿರುತ್ತಾರೆ.
ಸಂದೀಪ್ ಆ ದಿನ ಮನೆಗೆ ಬಾರದೇ ಇದ್ದಾಗ ನೆರೆ ಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಸಂದೀಪ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿರುವ ಪ್ರತೀಕ್‌ನನ್ನು ಪೊಲೀಸರು ರವಿವಾರ ಸಂಜೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಡುವೆ ರವಿವಾರ ಸಂಜೆ ವೇಳೆಗೆ ನೆಟ್ಟಣ ರೈಲ್ವೇ ನಿಲ್ದಾಣದ ಬಳಿ ಮೃತದೇಹವೊಂದು ಪತ್ತೆಯಾಗಿದೆ ಎನ್ನುವ ಸುದ್ದಿ ಹರಡಿ ಅದು ಸಂದೀಪ್ ಗೌಡ ನಾಪತ್ತೆಯಾಗಿರುವ ವಿಷಯಕ್ಕೆ ತಳಕುಹಾಕಿಕೊಂಡು ಗೊಂದಲಕ್ಕೆ ಕಾರಣವಾಯಿತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಬ ಪೊಲೀಸರು ನೆಟ್ಟಣದಲ್ಲಿ ಯಾವುದೇ ಮೃತದೇಹ ಪತ್ತೆಯಾಗಿಲ್ಲ. ಅದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.


























