ಬೆಂಗಳೂರು: ಆನ್ಲೈನ್ ಗೇಮಿಂಗ್ ಹುಚ್ಚು ತರೋ ಅವಾಂತರಗಳು ಒಂದೆರಡಲ್ಲ. ಕೇವಲ ಹಣ ಕಳೆದುಕೊಳ್ಳುವುದು ಮಾತ್ರವಲ್ಲ ಜತೆಗೆ ಜೀವವನ್ನೇ ತೆಗೆದು ಹಾಕುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಉದ್ಯಮಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿವೆ. ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿಯಾಗುರೋರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇಂಥದ್ದೊಂದು ಕೇಸ್ ಈಗ ಬೆಂಗಳೂರಲ್ಲಿ ನಡೆದಿದೆ. ಆನ್ಲೈನ್ ಗೇಮಿಂಗ್ಗೆ 19 ವರ್ಷದ ಪ್ರವೀಣ್ ಎಂಬ ಯುವಕ ಬಲಿಯಾಗಿದ್ದಾನೆ. ಕಳೆದ 10 ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸ್ರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.