ಮಂಡ್ಯ: ತನ್ನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ ನಡೆದಿದೆ.
ಮಂಡ್ಯ ತಾಲೂಕಿನ ಮುದಗಂದೂರು ಗ್ರಾಮದ ನಾಗೇಶ್(45) ಕೊಲೆಯಾದ ದುರ್ದೈವಿ. ಇನ್ನು ಮಂಡ್ಯ ತಾಲೂಕು ಹುಚ್ಚೇಗೌಡನಕೊಪ್ಪಲು ಗ್ರಾಮದ ನಾಗೇಶ್(43)ಕೊಲೆ ಆರೋಪಿ.
ಕೊಲೆ ಆರೋಪಿ ನಾಗೇಶ್ನ ಪತ್ನಿ ಜೊತೆ ಭಾವನೇ ಆದ ಮತ್ತೊಬ್ಬ ನಾಗೇಶ್ (ಹತ್ಯೆಯಾದ ವ್ಯಕ್ತಿ) ಎಂಬಾತ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಕೆರಳಿದ ಆರೋಪಿ ನಾಗೇಶ್, ಆತನನ್ನು ಮುಗಿಸಲೇಬೇಕು ಎಂದು ಪಕ್ಕ ಪ್ಲ್ಯಾನ್ ಮಾಡಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆಯಾದ ನಾಗೇಶ್ ಹಾಗೂ ಆರೋಪಿ ನಾಗೇಶ್ ನ ಎರಡು ಕುಟುಂಬಗಳು ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದರು. ಒಂದೇ ಏರಿಯಾದಲ್ಲಿ ಮನೆ ಮಾಡಿಕೊಂಡು ಇದ್ದರು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದರೇ, ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡುತ್ತಿದ್ದ. ಒಂದೇ ಮನೆಯ ಅಳಿಯಂದಿರೂ ಆಗಿದ್ದರು ಸಾಕಷ್ಟು ಸ್ನೇಹಿತರ ತರ ಇದ್ದರು. ಕಳೆದ ಹಲವು ದಿನಗಳಿಂದಲೂ ಒಟ್ಟಿಗೆ ಪಾರ್ಟಿ ಕೂಡ ಮಾಡುತ್ತಿದ್ದರು.
ವಾರದ ಹಿಂದೆ ಸಹ ಒಟ್ಟಿಗೆ ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೂ ಹೋಗಿ ಬಂದಿದ್ದರು. ಆದರೆ ಆರೋಪಿ ನಾಗೇಶ್ ಗೆ ಪತ್ನಿಯ ಶೀಲದ ಮೇಲೆ ಶಂಕೆ. ಸ್ವತಃ ಬಾವನೇ ನಾದಿನಿ ಜೊತೆ ಆಕ್ರಮ ಸಂಬಂಧವೊಂದಿದ್ದಾನೆ ಎಂಬ ಶಂಕೆ ಇತ್ತು. ಹೀಗಾಗಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ಗ್ರಾಮದ ಸಮೀಪವೇ ಕರೆದುಕೊಂಡು ಬಂದಿದ್ದಾನೆ.
ಬಳಿಕ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ 10.30 ಸುಮಾರಿಗೆ ನಾಗೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಮಾರನೇ ದಿನ ಮೃತದೇಹವನ್ನ ಸ್ಥಳೀಯರು ನೋಡಿ ಪೊಲೀಸರ ಮಾಹಿತಿ ನೀಡಿದ್ದರು. ಹತ್ಯೆ ಮಾಡಿ ಪರಾರಿಯಾಗಿದ್ದ ನಾಗೇಶ್ನನ್ನು ಶಿವಳ್ಳಿ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.