ಬಸ್ಸಿನಲ್ಲಿ, ಟ್ರೈನ್‌ನಲ್ಲಿ, ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಪಿಡಬ್ಲ್ಯೂಡಿ ಸಬ್ ಇಂಜಿನಿಯರ್ ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ತನ್ನ ವಿಶ್ರಾಂತಿ ಗೃಹಕ್ಕೆ ಕರೆಸಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಇಂಜಿನಿಯರ್‌ಗೆ ಚಪ್ಪಲಿಯಿಂದ ಥಳಿಸಿದ್ದಾಳೆ. ಈ ಘಟನೆಯ ವಿಡಿಯೋ ದೃಶ್ಯಾವಳಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಯುವತಿಯ ಈ ಧೈರ್ಯದ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಕಿರುಕುಳ ನೀಡಿದ ಪಿಡಬ್ಲ್ಯೂಡಿ ಸಬ್ ಇಂಜಿನಿಯರ್‌ಗೆ ಯುವತಿಯೊಬ್ಬಳು ಚಪ್ಪಲಿಯಿಂದ ಥಳಿಸಿದ್ದಾಳೆ.
ಭಾನುವಾರ (ಡಿಸೆಂಬರ್ 8) ಈ ಘಟನೆ ನಡೆದಿದ್ದು, ದಾಬ್ರಾದಲ್ಲಿ ಸಬ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಮ್ ಸ್ವರೂಪ್ ಕುಶ್ವಾಹ ಎಂಬಾತ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯೊಬ್ಬಳನ್ನು ತನ್ನ ವಿಶ್ರಾಂತಿ ಗೃಹಕ್ಕೆ ಕರೆಸಿಕೊಂಡಿದ್ದಾನೆ.
ನಂತರ ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದು, ಇದರಿಂದ ಕೆರಳಿದ ಯುವತಿ ಆತನಿಗೆ ಹಿಗ್ಗಾಮುಗ್ಗಾ ಚಪ್ಪಲಿ ಏಟು ನೀಡಿದ್ದಾಳೆ.
ಈ ಘಟನೆಯ ಬಗ್ಗೆ ಯುವತಿ ಯಾವುದೇ ದೂರನ್ನು ದಾಖಲಿಸಿಲ್ಲ. ದೂರು ಸ್ವೀಕರಿಸಿದ ನಂತರ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಾಬ್ರಾ ಎಸ್‌ಡಿಒಪಿ ವಿವೇಕ್ ಶರ್ಮಾ ತಿಳಿಸಿದ್ದಾರೆ.
FreePressMP ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವಿಶ್ರಾಂತಿ ಗೃಹಕ್ಕೆ ಕರೆಸಿಕೊಂಡ ಪಿಡಬ್ಲ್ಯೂಡಿ ಸಬ್ ಇಂಜಿನಿಯರ್‌ಗೆ ಚಪ್ಪಲಿಯಿಂದ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಈತ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕ್ತೀಯಾ ಅಂತ ಹೇಳುತ್ತಾ ಆತನಿಗೆ ಚಪ್ಪಲಿ ಏಟು ನೀಡಿದ್ದಾಳೆ.
ಯುವತಿಯ ಈ ದಿಟ್ಟ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.