“ಶ್ರವಣ, ಜ್ಞಾನ, ಮಂಥನ ಮತ್ತು ಅನುಷ್ಠಾನ ಇವುಗಳಿಂದ ಭಾರತೀಯ ವಾಙ್ಮಯದ ಮಹಿಮೆಯನ್ನು ತಿಳಿಯುವುದಕ್ಕೆ ಸಾಧ್ಯ. ಶ್ರೀಮದ್ ಭಗವದ್ಗೀತೆಯು ಮಹರ್ಷಿ ವೇದವ್ಯಾಸರಿಂದ ಜಗತ್ತಿಗೆ ಕೊಡಲ್ಪಟ್ಟ ಮಹಾನ್ ಸಾಹಿತ್ಯ. ಅದು ಮೇಲ್ನೋಟಕ್ಕೆ ಅರ್ಜುನನು ತನ್ನ ದೌರ್ಬಲ್ಯವನ್ನು ಮೀರಿ ನಿಲ್ಲುವುದಕ್ಕೆ ನೆರವಾದ ತಾತ್ವಿಕ ಬೋಧನೆ” ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾಕ್ಟರ್ ಶ್ರೀಶ ಕುಮಾರ ನುಡಿದರು.
ಅವರು ನರಿಮೊಗರಿನ ಸರಸ್ವತಿ ವಿದ್ಯಾಮಂದಿರದಲ್ಲಿ ಪುತ್ತೂರಿನ ದ್ವಾರಕಾ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಸಿದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು. ದ್ವಾರಕಾ ಪ್ರತಿಷ್ಠಾನದ ಗೌರವ ಸಲಹೆಗಾರರಾದ ಗಣರಾಜ ಕುಂಬಳೆ ವಹಿಸಿದ್ದರು. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ” ಜ್ಞಾನಿಗಳ ಸಾಂಗತ್ಯ, ಅವರ ಸೇವೆ, ಪರಿಪ್ರಶ್ನೆಗಳ ಮೂಲಕವಾಗಿ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಶ್ರದ್ಧಾಳುಗಳಾದವರು ಜ್ಞಾನವನ್ನು ಹೊಂದುತ್ತಾರೆ. ವಿದ್ಯೆ ಅಮೃತತ್ವದ ಕಡೆಗೆ ಒಯ್ಯುವುದು.ಈ ಗೀತಾ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ” ಎಂದರು.
ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ ಕೊಡಂಕಿರಿಯವರು ಗೀತಾ ಜಯಂತಿ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಅರ್ಥಪೂರ್ಣವಾಗಿ ಭಾಗಿಗಳಾಗಬೇಕೆಂದು ಕರೆಕೊಟ್ಟರು.

ಗೀತಾ ಪಠನ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಶ್ರೀಮತಿ ಶುಭಾ ಕೊಡಂಕಿರಿ, ಮುಖ್ಯ ಗುರುಗಳಾದ ಶ್ರೀಮತಿ ದಿವ್ಯ, ಶ್ರೀಮತಿ ಶ್ರೀ ಲಕ್ಷ್ಮೀ ಮೊಳೆಯಾರ ಅವರು ಉಪಸ್ಥಿತರಿದ್ದರು. ಸಂಸ್ಕೃತ ಅಧ್ಯಾಪಕ ಪರೀಕ್ಷಿತ ತೋಳ್ಪಾಡಿ ಕಾರ್ಯಕ್ರಮ ನಿರೂಪಿಸಿದರು.