ನವದೆಹಲಿ: ಮದುವೆಯಾಗುವುದು ನಂತರ ಗಂಡನ ಜೊತೆ ಜಗಳ ಮಾಡುವುದು, ಬಳಿಕ ಪತಿಯ ಕುಟುಂಬದವರ ವಿರುದ್ಧ ಕೇಸ್ ಹಾಕುವುದು. ಕೊನೆಗೆ ಪ್ರಕರಣದ ಇತ್ಯರ್ಥಕ್ಕಾಗಿ ಹಣ ಸುಲಿಗೆ ಮಾಡುವುದು. ಈ ನಾಟಕ ಮಾಡಲು ಸಾಧ್ಯವಾಗದಿದ್ದರೆ ಕಳ್ಳತನ ಮಾಡಿ ಪರಾರಿಯಾಗುವುದು. ಹೀಗೆ ಮಾಡಿಯೇ 1.25 ಕೋಟಿ ರೂ. ದೋಚಿದ್ದ ಖತರ್ನಾಕ್ ಮಹಿಳೆ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮದುವೆಯಾಗಿ ಸೆಟಲ್‌ಮೆಂಟ್ ಹೆಸರಿನಲ್ಲಿ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಿದ ಉತ್ತರಾಖಂಡ ಮೂಲದ ಸೀಮಾ ಎಂಬಾಕೆಯನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ.
ಸೀಮಾ 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮೊದಲು ವಿವಾಹವಾಗಿದ್ದಳು. ಕೆಲ ಸಮಯದ ಬಳಿಕ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿ ರಾಜಿ ಸಂಧಾನದ ಭಾಗವಾಗಿ 75 ಲಕ್ಷ ರೂ. ಪಡೆದಿದ್ದಳು.
2017 ರಲ್ಲಿ ಸೀಮಾ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಮದುವೆಯಾದಳು. ನಂತರ ಆತನಿಂದ ಬೇರ್ಪಟ್ಟ ನಂತರ ಪ್ರಕರಣದ ಇತ್ಯರ್ಥಕ್ಕಾಗಿ 10 ಲಕ್ಷ ರೂ. ತೆಗೆದುಕೊಂಡಿದ್ದಳು.
2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ವಿವಾಹವಾಗುತ್ತಾಳೆ. ಆದರೆ ಮದುವೆಯಾದ ಕೆಲ ದಿನಗಳಲ್ಲೇ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪತಿ ಮನೆಯಿಂದ ಪರಾರಿಯಾಗಿದ್ದಳು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.
ತನಿಖೆಯ ವೇಳೆ ಸೀಮಾ ವೈವಾಹಿಕ ಸೈಟ್‌ಗಳಲ್ಲಿ ವಿಚ್ಛೇದನ ಪಡೆದ ಅಥವಾ ಪತ್ನಿಯನ್ನು ಕಳೆದುಕೊಂಡ ಶ್ರೀಮಂತ ವ್ಯಕ್ತಿಯನ್ನು ಹುಡುಕುತ್ತಿದ್ದಳು. ಪ್ರಾಥಮಿಕ ತನಿಖೆಯ ವೇಳೆ ಸೀಮಾ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ. 10 ವರ್ಷ ಅವಧಿಯಲ್ಲಿ ಸೀಮಾ ಹಲವು ಮಂದಿಯನ್ನು ಮದುವೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.