ಪುತ್ತೂರು: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಕೂಟ ಮಾ.1 ಮತ್ತು 2 ರಂದು ನಡೆಸಲು ಡಿ.21ರಂದು ಪುತ್ತೂರು ಬೈಪಾಸ್ ರಸ್ತೆಯ ಉದಯಗಿರಿ ಸಭಾಂಗಣದಲ್ಲಿ ನಡೆದ ಕಂಬಳ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳವು ದ.ಕ.ಜಿಲ್ಲೆಗೆ ಮಾದರಿ ಕಂಬಳವಾಗಿ ಮೂಡಿಬರಲಿ. ಕಂಬಳದಿಂದ ನಮಗೆ ಹೆಸರು ಬಂದಿದೆ ವಿನಃ ನಮ್ಮಿಂದ ಕಂಬಳಕ್ಕೆ ಹೆಸರು ಬಂದದಲ್ಲ. ನಾವೇನಾದರೂ ಆಗಿದ್ದರೆ ಅದು ಕಂಬಳ ನಮಗೆ ನೀಡಿದ್ದಾಗಿದೆ. ಈಗ ನಮಗೆ ಏನಾದರೂ ಸ್ಥಾನಮಾನ ಸಿಕ್ಕಿದ್ದರೂ ಅದು ಕಂಬಳದಿಂದಲೇ ಆಗಿದೆ ಎಂದರು.
ಪುತ್ತೂರಿನಲ್ಲಿ ಈ ಬಾರಿ ಕಂಬಳ ನಡೆಸಲು ಯಾವುದೇ ತೊಂದರೆಯಾಗದು. ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಮೀರಿ ಕೆಲಸ ಮಾಡಿದರೆ ಕಂಬಳ ಯಶಸ್ವಿ ಆಗಬಹುದು. ಇದಕ್ಕೆ ಬೇಕಾದ ಸಹಕಾರ ಕೊಡಲು ನಾನು ಸಿದ್ದ ಎಂದ ಅವರು, ಬೆಂಗಳೂರು ಕಂಬಳದ ಬಗ್ಗೆ ಕೋರ್ಟಿನಲ್ಲಿನಲ್ಲಿರುವ ಕೇಸ್ ಮುಗಿದ ತತ್ ಕ್ಷಣ ಕಂಬಳ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಇತಿಹಾಸ ಪ್ರಸಿದ್ಧ ಹಾಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕೋಟಿ ಚೆನ್ನಯ ಜೋಡುಕರೆ ಕಂಬಳ ಪುತ್ತೂರಿನಲ್ಲಿ ಪ್ರತಿಷ್ಠಿತ ಕಂಬಳವಾಗಿ ಮೂಡಿಬಂದಿದೆ. ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಇಲ್ಲಿನ ಕಂಬಳವು ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿದೆ. ಕಂಬಳಕ್ಕೆ ಕೈ ಜೋಡಿಸಿದ ಹಲವಾರು ಮಂದಿಗೆ ಸ್ಥಾನಮಾನ ದೊರೆತಿದೆ ಎಂದರು.
ನಾನು ಪುತ್ತೂರು ಬಿಟ್ಟು 25 ವರ್ಷ ಕಳೆದರೂ ನನ್ನ ಮೇಲೆ ಪುತ್ತೂರಿನ ಜನ ಇಟ್ಟ ಪ್ರೀತಿ ವಿಶ್ವಾಸ ಇವತ್ತಿಗೂ ಕೂಡಾ ಅದೇ ರೀತಿ ಮುಂದುವರಿಯುತ್ತಾ ಬರುತ್ತಿದ್ದು, ಇದು ನಾನು ಸಂಪಾದಿಸಿದ ಆಸ್ತಿಯಾಗಿದೆ. ಪುತ್ತೂರಿನಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳ, ಸುಧಾಕರ್ ಶೆಟ್ಟಿ ಆರಂಭಿಸಿದ ಕಿಲ್ಲೆ ಮೈದಾನದ ಗಣೇಶೋತ್ಸವ, ರಂಜಾನ್ ತಿಂಗಳ ಸೌಹಾರ್ದ ಕೂಟದಲ್ಲಿ ಪ್ರತಿವರ್ಷ ಭಾಗವಹಿಸುತ್ತಿದ್ದೇನೆ. ಇದು ನನಗೆ ಆನಂದವನ್ನು ಉಂಟು ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮಾ. ಮತ್ತು 2ರಂದು ನಡೆಯುವ 32ನೇ ವರ್ಷದ ಕೋಟಿಚೆನ್ನಯ ಜೋಡುಕರೆ ಕಂಬಳವು ಅತ್ಯಂತ ಯಶಸ್ವಿಯಾಗಿ ಮೂಡಿಬರಲು ಎಲ್ಲರ ಸಹಕಾರ ಅಗತ್ಯವಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯುವ ಈ ಕಂಬಳವನ್ನು ದೇವರ ಸೇವೆಯಾಗಿ ಮಾಡುವ ಅವಕಾಶ ನಮಗೆ ಸಿಕ್ಕಿದೆ ಎಂದರು.
ಮಾಜಿ ಶಾಸಕಿ, ಕಂಬಳ ಸಮಿತಿ ಗೌರವ ಸಲಹೆಗಾರ ಶಕುಂತಳಾ ಶೆಟ್ಟಿ ಮಾತನಾಡಿ, ಪುತ್ತೂರು ಕಂಬಳ ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯವಿದೆ. ಪುತ್ತೂರಿನ ಕಂಬಳವು ರಾಜ್ಯಕ್ಕೆ ಮಾದರಿ ಕಂಬಳವಾಗಿ ಮೂಡಿ ಬರುತ್ತದೆ ಎಂದು ಹೇಳಿದರು.
ಕಂಬಳ ಸಮಿತಿ ಖಜಾಂಜಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ನಾನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಂಬಳ ಸಮಿತಿಗೆ ಸಿಕ್ಕ ಜಯವಾಗಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳವು ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಯಶಸ್ವಿಯಾಗಿ ನಡೆಯುವಂತಾಗಲಿ. ಇದಕ್ಕೆ ಬೇಕಾದ ಸಹಕಾರ ಪ್ರತಿಯೊಬ್ಬರು ನೀಡುವಂತಾಗಲಿ ಎಂದು ಅವರು ಹೇಳಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣನ್ಯಾಕ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಮಾತನಾಡಿ ಕಂಬಳದ ಯಶಸ್ವಿಗೆ ಎಲ್ಲರ ಸಹಕಾರ ಯಾಚಿಸಿದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ ರೈ, ಸಂಚಾಲಕ ವಸಂತ ಕುಮಾರ್ ರೈ ಜೆ.ಕೆ ವಂದಿಸಿದರು.
ವೇದಿಕೆಯಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿಉಪಸ್ಥಿತರಿದ್ದರು. ಕಂಬಳ ಸಮಿತಿಯ ಪದಾಧಿಕಾರಿಗಳಾದ ಉದ್ಯಮಿ ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಮಂಜುನಾಥ ಗೌಡ ತೆಂಕಿಲ, ವಿಲೈಡ್ ಫೆರ್ನಾಂಡಿಸ್, ಚಂದ್ರಶೇಖರ್ ರೈ, ಶರತ್ ಕೇಪುಳು, ಚಂದ್ರಹಾಸ ರೈ ಬನ್ನೂರು, ಶಿವಪ್ರಸಾದ್ ರೈ ಮಠಂತಬೆಟ್ಟು, ರಶೀದ್ ಮುರ, ಹಸೈನಾರ್ ಬನಾರಿ, ವೀಕ್ಷಿತ್, ಕಾರ್ತಿಕ್, ದಾಮೋದರ್ ಭಂಡಾರ್‌ಕರ್, ಪ್ರಶಾಂತ್ ಮುರ, ಭಾಗ್ಯಶ್ ರೈ, ಲೋಕೇಶ್ ಗೌಡ ಪಡ್ಡಾಯೂರು, ಉಮಾಶಂಕರ್ ನ್ಯಾಕ್, ಅಮಳರಾಮಚಂದ್ರ, ಕಿರಣ್ ಡಿಸೋಜ, ಶಶಿಕುಮಾರ್ ನೆಲ್ಲಿಕಟ್ಟೆ, ಜಗದೀಶ್ ಶೆಟ್ಟಿ ಜೀತ್, ಅಬ್ದುಲ್ ಖಾದರ್ ಪೋಳ್ಯ, ಪ್ರೇಮಾನಂದ ನ್ಯಾಕ್, ಯತೀಶ್ ಶೆಟ್ಟಿ ಕೋಡಿಂಬಾಡಿ, ಜೋಕಿಂ ಡಿಸೋಜ, ಶಿವಕುಮಾರ್, ಅಬ್ದುಲ್ ಖಾದರ್, ಹೆಚ್. ಮಹಮ್ಮದ್ ಆಲಿ, ರಂಜೀತ್ ಬಂಗೇರ, ಪ್ರವೀಣ್ ಚಂದ್ರ ಆಳ್ವ, ದಾಮೋದರ ಮುರ, ವಿಶ್ವಜೀತ್ ಅಮ್ಮುಂಜ, ಕೆ.ಜನಾರ್ದನ, ಅಬೂಬಕ್ಕರ್ ಮುಲಾರ್. ನೌಶಾದ್ ಬೊಳುವಾರು, ಸನತ್ ಕೈ ಒಳತ್ತಡ್ಕ, ವಿಕ್ರಂ ಶೆಟ್ಟಿ ಅಂತರ, ಹರ್ಷ ಶೆಟ್ಟಿ, ಕಿಶೋರ್ ಸರೋಳಿ, ಸುದರ್ಶನ್ ನ್ಯಾಕ್ ಕಂಪ, ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ
ಪ್ರತಿ ಕಂಬಳಕ್ಕೆ ತಲಾ ರೂ.5 ಲಕ್ಷದಂತೆ ಸರಕಾರದ ವತಿಯಿಂದ ಒಟ್ಟು ರೂ. 1.20 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಕಾರಣಕರ್ತರಾದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ, ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡ ದಿನೇಶ್ ಕುಲಾಲ್ ಪಿ.ವಿ. ಕಂಬಳ ಸಮಿತಿಯ ಸದಸ್ಯರಾದ ವಿನಯಕುಮಾರ್ ಸವಣೂರು, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಸನ್ಮಾನ ಮಾಡಲಾಯಿತು.