ಮಂಗಳೂರು: ಆಶಾ ಪ್ರಕಾಶ್ ಶೆಟ್ಟಿ ‘ನೆರವು’ ಸಹಾಯಹಸ್ತ ಪ್ರದಾನ ಕಾರ್ಯಕ್ರಮ ದ.25ರಂದು ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.
ಎಂ.ಆರ್.ಜಿ. ಗ್ರೂಪ್ ಚೇರ್ಮೆನ್ ಡಾ|ಕೆ.ಪ್ರಕಾಶ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ,‘ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.ನನ್ನ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಸಮಾಜಕ್ಕೆ ನೆರವು ನೀಡುವ ಸಂಕಲ್ಪ ಮಾಡಿದ್ದೇನೆ.
ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ.ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ, ಮಗ, ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ.ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ ಮೂಲಕ ಸಹಾಯ ಪಡೆದ ಕೈಗಳು ಮುಂದೊಂದು ದಿನ ಅವರು ಕೂಡಾ ಸಮಾಜದಲ್ಲಿ ಒಂದಷ್ಟು ಮಂದಿಗೆ ನೆರವು ನೀಡಲು ಮುಂದೆ ಬರಬೇಕು.ಈ ನಿಟ್ಟಿನಲ್ಲಿ ಈಗಾಗಲೇ ಹಲವರು ಮುಂದೆ ಬಂದಿದ್ದಾರೆ’ ಎಂದರು.

ಯೋಜನೆ ಆರಂಭದ ವರ್ಷ 2019. ಮೊದಲ ವರ್ಷ ವಿತರಣೆ ಮಾಡಲಾದ ಮೊತ್ತ 1.25 ಕೋಟಿ ರೂಪಾಯಿ.ಈ ಮೊತ್ತ ಏರುತ್ತಾ ಹೋಗಿದೆ.ಈ ಯೋಜನೆಯ ವ್ಯಾಪ್ತಿ ದಕ್ಷಿಣ ಕನ್ನಡ, ಉಡುಪಿ ಮತ್ತು ಗಡಿನಾಡು ಕಾಸರಗೋಡು ಜಿಲ್ಲೆಗಳು.ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯತೆಯ ಹಿನ್ನೆಲೆಯಲ್ಲಿ ಈ ಗಡಿಯನ್ನು ದಾಟಿಯೂ ನೆರವು ನೀಡಲಾಗಿದೆ ಎಂದು ಅವರು ಹೇಳಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರು ತಮ್ಮ ಮಿತಿಯಲ್ಲಿ ಸಾಮಾಜಿಕ ಹೊಣೆಗಾರಿಕೆಯಿಂದ ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯವಿದೆ ಎಂದು ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನ ಅಧ್ಯಕ್ಷರು ಹಾಗು ಸಹ ಸಂಸ್ಥಾಪಕರೂ ಆಗಿರುವ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, ‘ಬೆಂಗಳೂರು ಹುಬ್ಬಳ್ಳಿ ಗುಲ್ಬರ್ಗದಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅದಮ್ಯ ಫೌಂಡೇಶನ್ನ ಸಂಸ್ಥಾಪಕಿ ತೇಜಸ್ವಿನಿ ಅನಂತ ಕುಮಾರ್ ಅವರು ಮಾಡುತ್ತಾ ಬಂದಿದ್ದಾರೆ.ಅದೇ ರೀತಿ ಪ್ರಕಾಶ್ ಶೆಟ್ಟಿಯವರ ಇಂತಹ ಪುಣ್ಯ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ಅವರ ಕುಟುಂಬಕ್ಕೆ ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು.

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ,‘ಪ್ರಕಾಶ್ ಶೆಟ್ಟಿ ಅವರಂಥವರ ಜೊತೆಯಲ್ಲಿ ಇರುವುದೇ ನಮ್ಮ ಭಾಗ್ಯ.ಹುಟ್ಟುವಾಗ ಶ್ರೀಮಂತಿಕೆ ಇಲ್ಲದಿದ್ದರೂ ತಮ್ಮ ಕಾರ್ಯ ಸಾಧನೆಯಿಂದ ಹಂತಹಂತವಾಗಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿ ಗುರುತಿಸಿಕೊಂಡು ಬಂದಿರುವ ಪ್ರಕಾಶ್ ಶೆಟ್ಟಿ ಅವರ ವ್ಯಕ್ತಿತ್ವ ನಮಗೆಲ್ಲ ಮಾದರಿ.ಅವರ ದಾನ ಧರ್ಮದ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ’ ಎಂದರು.ಶಿಕ್ಷಣ, ಮನೆ ನಿರ್ಮಾಣ, ವೈದ್ಯಕೀಯ ಚಿಕಿತ್ಸೆ, ವಿಶೇಷ ಚೇತನ ಮಕ್ಕಳು ಹಾಗೂ ಸಾಮಾಜಿಕ ಸಂಘಟನೆಗಳಿಗೆ ಸಾಂಕೇತಿಕವಾಗಿ ‘ನೆರವು’ ಯೋಜನೆಯ ಆರ್ಥಿಕ ಸಹಾಯ ನೀಡಲಾಯಿತು.ಸಮಾರಂಭದಲ್ಲಿ ಎಂ.ಆರ್.ಜಿ.ಗ್ರೂಪ್ನ ಆಡಳಿತ ನಿರ್ದೇಶಕರಾದ ಗೌರವ್ ಪಿ.ಶೆಟ್ಟಿ ಉಪಸ್ಥಿತರಿದ್ದರು.ಅನುಷ್ಕಾ ಶೆಟ್ಟಿ ವಂದಿಸಿದರು.ವಸಂತ ಗಿಳಿಯಾರು ಕಾರ್ಯಕ್ರಮ ನಿರೂಪಿಸಿದರು.
ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ‘ನೆರವು’ಪ್ರದಾನ ಕಾರ್ಯಕ್ರಮದಲ್ಲಿ ಈ ವರ್ಷ ಒಟ್ಟು 3000 ಕುಟುಂಬಗಳಿಗೆ, 50 ಸಂಸ್ಥೆಗಳಿಗೆ ಸೇರಿ 6 ಕೋಟಿ ರೂಪಾಯಿಗೂ ಮಿಕ್ಕಿ ನೆರವನ್ನು ವಿತರಿಸಲಾಗುತ್ತಿದೆ.ಮುಂದೆ ಗೋಲ್ಡ್ ಪಿಂಚ್ ಸಿಟಿಯಲ್ಲಿ ಐ.ಟಿ ಪಾರ್ಕ್ ಟೌನ್ಶಿಪ್ ಅಭಿವೃದ್ಧಿ ಪಡಿಸಿ ಸುಮಾರು ೬೦ ಸಾವಿರ ಉದ್ಯೋಗ ನೀಡುವ ಗುರಿ ಇದೆ-
ಡಾ|ಪ್ರಕಾಶ್ ಶೆಟ್ಟಿ, ಚೇರ್ಮ್ಯಾನ್, ಎಂಆರ್ಜಿ ಗ್ರೂಪ್