ಬೆಂಗಳೂರು: ಹುಟ್ಟುಹಬ್ಬದ ದಿನವೇ ಬಾಲಕ ಅಪಘಾತಕ್ಕೆ ಬಲಿಯಾದ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಭಾನು ತೇಜ(10) ಮೃತ ಬಾಲಕ. ಶನಿವಾರ ರಾತ್ರಿ ಅಣ್ಣನ ಜೊತೆ ಹೊರಮಾವುಗೆ ತೆರಳುತ್ತಿದ್ದಾಗ ಹೆಣ್ಣೂರು ಬಂಡೆಯ ಕ್ಲಾಸಿಕ್ ರಾಯಲ್ ಗಾರ್ಡನ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ.
ಹಿಂಬದಿಯಿಂದ ಏಕಾಏಕಿ ಟ್ರಕ್ ಡಿಕ್ಕಿ ಹೊಡೆದಿದೆ. ಟ್ರಕ್ನ ಎರಡು ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಭಾನು ತೇಜ ಶಿರ ಛಿದ್ರಛಿದ್ರವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟ್ರಕ್ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಚಿತ್ತೂರು ಮೂಲದ ರವಿ ಹಾಗೂ ಸುಮಾ ದಂಪತಿಯ ಪುತ್ರನಾಗಿದ್ದ ಭಾನು ತೇಜ ವೇದ ಕಲಿಯಲು ಬೆಂಗಳೂರಿಗೆ ಬಂದಿದ್ದ. ಆರ್ಟಿ ನಗರದ ಅಕ್ಕನ ಮನೆಯಲ್ಲಿ ವಾಸವಿದ್ದ. ಆಂಜನೇಯ ದೇವಸ್ಥಾನದಲ್ಲಿ ಭಾನುತೇಜಾನ ಅಣ್ಣ ಅರ್ಚಕರಾಗಿದ್ದರು.
ಧನುರ್ಮಾಸದಲ್ಲಿ ಬೇಗನೇ ದೇವಸ್ಥಾನದ ಬಾಗಿಲನ್ನು ಸೂರ್ಯೋದಯಕ್ಕೂ ಮೊದಲೇ ತೆಗೆಯಬೇಕು. ಹೀಗಾಗಿ ಬೆಳಗ್ಗೆ ಬೇಗನೇ ಹೋಗಿ ತೆಗೆಯಲು ಕಷ್ಟವಾಗುತ್ತದೆ. ರಾತ್ರಿಯೇ ದೇವಸ್ಥಾನದಲ್ಲಿ ಮಲಗಿದರೆ ಬೆಳಗ್ಗೆ ಬೇಗ ಬಾಗಿಲು ತೆಗೆಯಬಹುದು ಎಂದು ಹೇಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಅಂಬೇಡ್ಕರ್ ಆಸ್ಪತ್ರೆಗೆ ಮೃತ ಬಾಲಕನ ದೇಹ ರವಾನೆ ಮಾಡಲಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಬಾಲಕನ ಅಣ್ಣನಿಗೆ ಗಾಯವಾಗಿದ್ದು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿತ್ತೂರಿನಿಂದ ಭಾನುತೇಜನ ಪೋಷಕರು ಆಗಮಿಸಿದ್ದಾರೆ.
ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದು ಆತನ ಬಂಧನಕ್ಕೆ ಈಗ ಪೊಲೀಸರು ಶೋಧ ನಡೆಸುತ್ತಿದ್ದಾರೆ.