ಭಾರತದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಕೇರಳದ ತಿರುವನಂತಪುರದಲ್ಲಿರುವ ಅನಂತ ಪದ್ಮನಾಭ ಸ್ವಾಮಿ ಕೂಡ ಒಂದು. ಈ ದೇಗುಲಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದಾರೆ.
ಮಹಾಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಭಾಗ್ಯ ದೊರಕುವುದು ಅಂದರೆ ವೈಕುಂಠದಲ್ಲಿ ದೇವರನ್ನು ಸ್ವತಃ ಪೂಜಿಸಿದ ಗರಿಮೆ. ಮಹಾಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಸ್ಥಾನವನ್ನು ಈವರೆಗೆ ಅತಿ ಸಣ್ಣ ವಯಸ್ಸಿನಲ್ಲಿ ಪಡೆದವರು ಇವರಾಗಿದ್ದಾರೆ.
ಕೊಕ್ಕಡದ ದಿ.ಸುಬ್ರಾಯ ತೋಡ್ತಿ ಲ್ಲಾಯ ಹಾಗೂ ಶಾರದ ದಂಪತಿ ಎರಡನೇ ಪುತ್ರರಾದ ಬಡೆಕ್ಕರ ಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯರು ಆರು ತಿಂಗಳ ಹಿಂದೆ ಇಲ್ಲಿಗೆ ಪ್ರಧಾನ ಅರ್ಚಕರಾಗಿ ನೇರವಾಗಿ ನಿಯುಕ್ತಿಗೊಂಡಿದ್ದರು. ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹಾಪ್ರಧಾನ ಅರ್ಚಕ ಸ್ಥಾನ ಪ್ರಾಪ್ತಿಯಾಗಿದೆ.