ಹಾವೇರಿ: ಗಾಯಗೊಂಡಿದ್ದ ಹುಡುಗನಿಗೆ ಹೊಲಿಗೆಯ ಬದಲಾಗಿ ಫೆವಿಕ್ವಿಕ್ ಹಾಕಿರುವ ಘಟನೆ 2023ರಲ್ಲಿ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾದಲ್ಲಿ ಬೆಳಕಿಗೆ ಬಂದಿತ್ತು. ಇದು ಭಾರೀ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದೇ ಮಾದರಿಯ ಘಟನೆ ಕರ್ನಾಟಕದಲ್ಲಿ ನಡೆದಿದೆ. ಹೌದು….ಬಾಲಕನ ಗಾಯಕ್ಕೆ ಸ್ಟಿಚ್ ಹಾಕುವ ಬದಲು ನರ್ಸ್ ಫೆವಿಕ್ವಿಕ್ ಹಾಕಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ ಎನ್ನುವ 7 ವರ್ಷದ ಬಾಲಕ ಆಟವಾಡುವಾಗ ಕೆನ್ನೆ ಬಾಗಕ್ಕೆ ಗಾಯ ಮಾಡಿಕೊಂಡಿದ್ದು, ಆ ಗಾಯ ಬಲವಾಗಿತ್ತು. ಹೀಗಾಗಿ ಅದಕ್ಕೆ ಹೊಲಿಗೆ ಹಾಕಲೇಬೇಕಿತ್ತು. ಆದ್ರೆ, ಆಡೂರು ಸರ್ಕಾರಿ ಆಸ್ಪತ್ರೆ ನರ್ಸ್ ಜ್ಯೋತಿ ಸ್ಟಿಚ್ ಬದಲು ಫೆವಿಕ್ವಿಕ್ ಹಾಕಿದ್ದಾರೆ.
ಕಳೆದ ಜನವರಿ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.7 ವರ್ಷದ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕನಿಗೆ ಕೆನ್ನೆ ಮೇಲೆ ಗಾಯ ಆಗಿತ್ತು. ಆಟ ಆಡುವಾಗ ಗುರುಕಿಶನ್ ಕೆನ್ನೆಗೆ ಗಾಯ ಮಾಡಿಕೊಂಡಿದ್ದ.
ಕೆನ್ನೆಯ ಮೇಲಿನ ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಕೂಡ ಸುರಿಯುತ್ತಿತ್ತು. ಕೂಡಲೇ ಬಾಲಕ ಗುರುಕಿಶನ್ ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆದೊಯ್ದಿದ್ದರು. ವಿದ್ಯಾರ್ಥಿಗೆ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್ ಜ್ಯೋತಿ ಎನ್ನುವವರು ಚಿಕಿತ್ಸೆ ನೀಡಿದ್ದಾರೆ.
ಫೆವಿಕ್ವಿಕ್ ಹಾಕುವ ವಿಡಿಯೋವನ್ನು ಬಾಲಕನ ಪೋಷಕರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ಬಗ್ಗೆ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಇನ್ನು ಈ ಬಗ್ಗೆ ವರದಿ ಪಡೆದ ಡಿ.ಹೆಚ್ ಒ ರಾಜೇಶ್ ಸುರಗಿಹಳ್ಳಿ ಅವರು ನರ್ಸ್ ಜ್ಯೋತಿ ಅವರನ್ನು ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಿ ಆದೇಶ ಮಾಡಿದ್ದಾರೆ ಅಷ್ಟೇ. ಆದ್ರೆ, ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದರೂ ನರ್ಸ್ ಜ್ಯೋತಿಯನ್ನು ಅಮಾನತು ಮಾಡಲು ಡಿಹೆಚ್ ಒ ಹಿಂದೇಟು ಹಾಕಿದ್ದಾರೆ.