ಕಲಬುರಗಿ: ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಎರಡು ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿ. ಇನ್ನು ಈ ಸಂಬಂಧ ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಸುಪಾರಿ ತೆಗೆದುಕೊಂಡು ವೆಂಕಟೇಶನ ಕಾಲು ಮುರಿದ ಆರೀಫ್, ಮನಹೋರ, ಸುನೀಲ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ ಕೆಲ ತಿಂಗಳಿನಿಂದ ಓರ್ವ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಈ ಸಂಬಂಧ ಕೋಪಗೊಂಡಿದ್ದ ಪತ್ನಿ ಉಮಾದೇವಿ, ಮಹಿಳೆ ಜೊತೆಗಿನ ಸ್ನೇಹ ಬಿಡುವಂತೆ ಒತ್ತಾಯಿಸಿದ್ದಾಳೆ. ಆದರೂ ವೆಂಕಟೇಶ್ ತನ್ನ ಸಲುಗೆ ಮುಂದುವರಿಸಿದ್ದಾನೆ. ಇದರಿಂದ ಕೆರಳಿ ಪತ್ನಿ ಉಮಾದೇವಿ ಸುಪಾರಿ ನೀಡಿ ವೆಂಕಟೇಶನ ಎರಡು ಕಾಲುಗಳನ್ನ ಮುರಿಸಿದ್ದಾಳೆ.
ವೆಂಕಟೇಶ ಮಹಿಳೆಯೊಂದಿಗಿನ ಸಲುಗೆ ಬಗ್ಗೆ ಹೆಂಡ್ತಿ ಪ್ರಶ್ನಿಸಿದ್ದಳು. ಅವಳ ಸ್ನೇಹ ಬಿಡುವಂತೆ ಆಗ್ರಹಿಸಿದ್ದಳು. ಆದರೂ ಹೆಂಡ್ತಿ ಮಾತು ಕೇಳದ ವೆಂಕಟೇಶ ತನ್ನ ಸ್ನೇಹ ಮುಂದುವರಿಸಿದ್ದಾನೆ. ಇದರಿಂದ ವೆಂಕಟೇಶ್ ಹಾಗೂ ಉಮಾದೇವಿ ನಡುವೆ ನಡುವೆ ಹಲವು ಬಾರಿ ಜಗಳವಾಗಿತ್ತು. ಆದರೂ ಮಾತು ಕೇಳದ ವೆಂಕಟೇಶನ ಕಾಲು ಮುರಿಸಿದರೆ ಮನೆಯಲ್ಲೇ ಬಿದ್ದಿರುತ್ತಾನೆಂದು ಪ್ಲ್ಯಾನ್ ಮಾಡಿದ ಉಮಾದೇವಿ ಬೇರೆಯವರಿಗೆ 5 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾಳೆ.
ಉಮಾದೇವಿ ನೀಡಿದ ಸುಪಾರಿ ಮೇರೆಗೆ ಆರೀಫ್, ಮನಹೋರ, ಸುನೀಲ್ ಎನ್ನುವರು ವೆಂಕಟೇಶನ ಎರಡೂ ಕಾಲು ಮುರಿದಿದ್ದಾರೆ. ಬಳಿಕ ವೆಂಕಟೇಶ್ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನ ಸಹ ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ.