ಹಿಂದೆಲ್ಲಾ ಒಂದು ಮದುವೆ ಮಾಡ್ಬೇಕಂದ್ರೆ ಹುಡುಗ ಹುಡುಗಿಯ ಜಾತಕ ಹೊಂದಾಣಿಕೆಯಾಗುತ್ತದೆಯೇ, ಗುಣಗಳು ಕೂಡಿ ಬರುತ್ತದೆಯೇ, ಹುಡುಗ ಹುಡುಗಿ ಸಂಸ್ಕಾರವಂತರೇ ಎಂಬುದನ್ನು ಪರಿಶೀಲಿಸುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ, ಜಾತಕ ಹೊಂದಾಣಿಕೆ ಆಗಿಲ್ಲ ಅಂದ್ರೂ ಪರವಾಗಿಲ್ಲ ಹುಡುಗ ಸ್ಥಿತಿವಂತನಾಗಿದ್ರೆ ಅಥವಾ ಆತ ಒಳ್ಳೆಯ ಕೆಲಸದಲ್ಲಿದ್ರೆ ಆತನಿಗೆಯೇ ಮಗಳನ್ನು ಮದುವೆ ಮಾಡಿ ಕೊಡ್ತಾರೆ.
ಇನ್ನೂ ಹುಡುಗನಿಗೆ ಕಮ್ಮಿ ಸಂಬಳ ಇದೆ ಅಂದ್ರೆ ಮದುವೆ ಮಾಡಲು ಕೂಡಾ ಹಿಂದೆ ಮುಂದೆ ನೋಡ್ತಾರೆ. ಇಲ್ಲೊಂದು ಇದಕ್ಕೆ ನಿದರ್ಶನದಂತಿರು ಘಟನೆ ನಡೆದಿದ್ದು, ವರನ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂದು ವಧುವಿನ ಕಡೆಯವರು ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಈ ಸುದ್ದಿ ಇದೀಗ ಭಾರಿ ವೈರಲ್ ಆಗುತ್ತಿದೆ.
ಈ ವಿಚಿತ್ರ ಪ್ರಕರಣ ಮಹಾರಾಷ್ಟ್ರದ ಮೂರ್ತಿಜಾಪುರ ಎಂಬಲ್ಲಿ ನಡೆದಿದ್ದು, ಹುಡುಗನ ಸಿಬಿಲ್ ಸ್ಕೋರ್ ಕಡಿಮೆಯಿದೆ ಎಂಬ ಕಾರಣಕ್ಕೆ ವಧುವಿನ ಕುಟುಂಬಸ್ಥರು ನಿಶ್ಚಯವಾಗಿದ್ದ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಹುಡುಗಿ ನೋಡುವ ಸಂಪ್ರದಾಯದ ಬಳಿಕ ಎರಡೂ ಕುಟುಂಬಗಳಿಗೂ ಸಂಬಂಧ ಒಪ್ಪಿಗೆಯಾಗಿತ್ತು. ಮದುವೆ ಕೂಡಾ ಬಹುತೇಕ ಕನ್ಫರ್ಮ್ ಆಗಿತ್ತು. ಆದರೆ ಕೊನೆಯ ಸುತ್ತಿನ ಮಾತುಕತೆಗೂ ಮುನ್ನ ಹುಡುಗಿಯ ಮಾವ ವರನ ಸಿಬಿಲ್ ಸ್ಕೋರ್ ಪರಿಶೀಲಿಸಲು ಒತ್ತಾಯಿಸಿದ್ದು, ಹೀಗೆ ಪರೀಕ್ಷಿಸಿದಾಗ ಸಿಬಿಲ್ ಸ್ಕೋರ್ ಕಡಿಮೆಯಿರುವುದನ್ನು ಕಂಡು ವಧುವಿನ ಕಡೆಯವರು ಮದುವೆ ಬೇಡವೇ ಬೇಡ ಎಂದು ಹೇಳಿದ್ದಾರೆ.
ಸಿಬಿಲ್ ಸ್ಕೋರ್ ಪರೀಕ್ಷಿಸಿದ ಸಂದರ್ಭದಲ್ಲಿ ಹುಡುಗ ಅನೇಕ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾನೆ ಮತ್ತು ಅವನ ಆರ್ಥಿಕ ಸ್ಥಿತಿ ಅಷ್ಟಾಗಿ ಚೆನ್ನಾಗಿರಲಿಲ್ಲ ಎಂಬುದು ಹುಡುಗಿಯ ಕುಟುಂಬಕ್ಕೆ ಗೊತ್ತಾಗಿದೆ. ಇದನ್ನು ನೋಡಿ ಶಾಕ್ ಆದ ಹುಡುಗಿ ಮನೆಯವರು ʼಹುಡುಗ ಈಗಾಗಲೇ ಸಾಲದಲ್ಲಿದ್ದಾನೆ, ಇವನಿಗೆ ನಮ್ಮ ಮನೆ ಮಗಳನ್ನು ಮದುವೆ ಮಾಡಿ ಕೊಟ್ರೆ ಆಕೆ ಭವಿಷ್ಯ ಏನಾಗಬೇಡʼ ಎಂದು ಕಳವಳ ವ್ಯಕ್ತಪಡಿಸಿ ಮನೆ ಮಗಳ ಭವಿಷ್ಯದ ದೃಷ್ಟಿಯಿಂದ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ.