ಉತ್ತರ ಪ್ರದೇಶದ ಝಾನ್ಸಿಯಲ್ಲಿ 27 ವರ್ಷದ ಸೋನಾಲಿ ಬುಧೋಲಿಯಾ ಎಂಬ ಮಹಿಳೆಯ ಸಾವಿನ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. 4 ವರ್ಷದ ಮಗಳು ತನ್ನ ತಾಯಿಯನ್ನು ಕೊಂದಿದ್ದು ಯಾರು? ಅಮ್ಮನ ಸಾಯಿಸಿದ್ದು ಹೇಗೆ ಅನ್ನೋದರ ಬಗ್ಗೆ ಡ್ರಾಯಿಂಗ್ ಸ್ಕೆಚ್ ಬರೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸೋನಾಲಿ ಬುಧೋಲಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ಪತಿ ಸಂದೀಪ್ ಬುಧೋಲಿಯಾ ನಂಬಿಸಿದ್ದರು. ಆದರೆ ಈಗ ತನ್ನ ತಾಯಿಯನ್ನು ಕೊಂದಿದ್ದು ಬೇರಾರು ಅಲ್ಲ, ತನ್ನ ತಂದೆಯೇ ಎಂದು 4 ವರ್ಷದ ಮಗಳು ಸ್ಕೆಚ್ ಮೂಲಕ ಹೇಳಿದ್ದಾಳೆ. ಮಗಳ ಡ್ರಾಯಿಂಗ್ ಸ್ಕೆಚ್‌ನಿಂದ ತಂದೆಯೇ ಕೊಲೆಗಾರ ಅನ್ನೋ ಸುಳಿವು ಪೊಲೀಸರಿಗೆ ಸಿಕ್ಕಿದೆ.
ಪತಿ ಸಂದೀಪ್ ಬುಧೋಲಿಯಾನಿಂದ ಪತ್ನಿ ಸೋನಾಲಿಯ ಹತ್ಯೆ ಮಾಡಲಾಗಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲಾಗಿತ್ತು.
ಮಧ್ಯಪ್ರದೇಶ ಟಿಕಾಮಘರ್ ಜಿಲ್ಲೆಯ ಸಂಜೀವ್ ತ್ರಿಪಾಠಿ ತಮ್ಮ ಮಗಳು ಸೋನಾಲಿಯನ್ನು 2019ರಲ್ಲಿ ಸಂದೀಪ್ ಬುಧೋಲಿಗೆ ಕೊಟ್ಟು ಮದುವೆ ಮಾಡಿದ್ದರು. ಮಗಳ ಮದುವೆ ವೇಳೆ 20 ಲಕ್ಷ ರೂಪಾಯಿ ಹಣವನ್ನು ಸಂದೀಪ್‌ಗೆ ನೀಡಿದ್ದರು.
20 ಲಕ್ಷ ರೂಪಾಯಿಗೆ ಸುಮ್ಮನಾಗದ ಸಂದೀಪ್ ಮನೆಯವರು ಹೊಸ ಬೇಡಿಕೆಗಳನ್ನು ಇಟ್ಟರು. ಕಾರು ನೀಡುವಂತೆ ಬೇಡಿಕೆ ಇಟ್ಟರು. ಆದರೆ ಸೋನಾಲಿ ತಂದೆ ಸಂಜೀವ್ ತ್ರಿಪಾಠಿ ತಮಗೆ ಕಾರು ಕೊಡುವ ಶಕ್ತಿ ನಮಗಿಲ್ಲ ಎಂದು ಹೇಳಿದ್ದರು.
ಇದಾದ ಮೇಲೆ ತಮ್ಮ ಮಗಳು ಸೋನಾಲಿಗೆ ಹೊಡೆಯಲು ಆರಂಭಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆಮೇಲೆ ಠಾಣೆಯಲ್ಲಿ ರಾಜೀ ಸಂಧಾನ ಮಾಡಿಕೊಳ್ಳಲಾಗಿತ್ತು. ಬಳಿಕ ಸೋನಾಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಸಂದೀಪ್ ಮನೆಯವರಿಗೆ ಗಂಡು ಮಗು ಬೇಕಾಗಿತ್ತು. ಸೋನಾಲಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದರು. ನಾನು ನರ್ಸಿಂಗ್ ಹೋಮ್‌ಗೆ ಹೋಗಿ ಬಿಲ್ ಕಟ್ಟಿ ಮನೆಗೆ ಮಗಳನ್ನು ಕರೆ ತಂದಿದ್ದೆ. ಬಳಿಕ ಬಂದು ಸೋನಾಲಿ ಮಗಳು ದರ್ಶಿತಾಳನ್ನು ಕರೆದುಕೊಂಡು ಹೋಗಿದ್ದರು ಎಂದು ಸೋನಾಲಿ ತಂದೆ ಹೇಳಿದ್ದಾರೆ. ಈ ಬಗ್ಗೆ ಝಾನ್ಸಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.