ಪುತ್ತೂರು: ಕಳೆದ 40 ವರ್ಷಗಳಿಂದ ಇತ್ಯರ್ಥವಾಗದೆ ವಿವಾದದಲ್ಲಿದ್ದ ಮಂಜಲ್ಪಡ್ಪು ತೋಟಗಾರಿಕಾ ಇಲಾಖಾ ಬಳಿಯಿಂದ ಪೆರಿಯತ್ತೋಡಿ ಆಶ್ರಯ ಕಾಲನಿಗೆ ತೆರಳುವ ಸಂಪರ್ಕ ರಸ್ತೆಯ ವಿವಾದ ಪರಿಹಾರವಾಗಿದ್ದು ಶಾಸಕ ಅಶೋಕ್ ರಐ ನೇತೃತ್ವದಲ್ಲಿ ಸುಖಾಂತ್ಯ ಕಂಡಿದೆ.
ಪೆರಿಯತ್ತೋಡಿ ಆಶ್ರಯ ಕಾಲನಿ ಸಂಪರ್ಕ ರಸ್ತೆ ಕಾಂಕ್ರಿಟೀಕರಣವಾಗಿರಲಿಲ್ಲ. ಈ ಭಾಗದ ಜನರು ಸುಮಾರು 40 ವರ್ಷಗಳಿಂದ ಸರಿಯಾದ ರಸ್ತೆ ಇಲ್ಲದೆ ವ್ಯಥೆ ಪಡುವಂತಾಗಿದ್ದು ಎರಡು ತಿಂಗಳ ಹಿಂದೆ ಕಾಲನಿಗೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ ಅವರು ಈ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಸಕರು ಇಲ್ಲಿನ ರಸ್ತೆ ಅಭಿವೃದ್ದಿಗೆ 36.5 ಲಕ್ಷ ಅನುದಾನವನ್ನು ನೀಡಿದ್ದು ಅದರ ಗುದ್ದಲಿಪೂಜೆ ಶುಕ್ರವಾರ ಸಂಜೆ ನೆರವೇರಿಸಲಾಗಿದೆ.

ವಿವಾದ ಏನು?
ಈ ರಸ್ತೆ ಹಾದು ಹೋಗುವಾಗ ಮಧ್ಯದಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಾಗದ ಬದಿಯಲ್ಲಿ ತೆರಳಬೇಕಾಗಿದ್ದು, ಖಾಸಗಿ ವ್ಯಕ್ತಿಯೋರ್ವರು ಇದು ತನ್ನ ವರ್ಗ ಜಾಗವಾಗಿದ್ದು ಇಲ್ಲಿಂದ ರಸ್ತೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕಾರಣಕ್ಕೆ ಕಳೆದ 40 ವರ್ಷಗಳಿಂದ ಇದು ವಿವಾದವಾಗಿಯೇ ಉಳಿದಿತ್ತು. ಈ ಭಾಗದಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದ್ದು ಸರಿಯಾದ ರಸ್ತೆ ಸಂಪರ್ಕ ಇರಲಿಲ್ಲ. ತೋಟಗಾರಿಕಾ ಇಲಾಖಾ ಕಚೇರಿಯಿಂದ ಸ್ವಲ್ಪ ಮುಂದಕ್ಕೆ ಮಾತ್ರ ಕಾಂಕ್ರೀಟ್ ಮಾಡಲಾಗಿತ್ತು.40 ವರ್ಷಗಳಿಂದ ಈ ಭಾಗದ ಜನರು ಸರಿಯದ ರಸ್ತೆಯಿಲ್ಲದೆ ತೊಂದರೆಗೀಡಾಗಿದ್ದು ಶಾಸಕರಾದ ಅಶೋಕ್ ರೈ ಗಮನಕ್ಕೆ ತಂದಿದ್ದರು.
ಸರ್ವೆ ಮಾಡಿ ಸೂಕ್ತ ಕ್ರಮ
ಇಲ್ಲಿನ ವಿವಾದಿತ ಜಾಗವನ್ನು ಸರ್ವೆ ಮಾಡಿ ಅದು ಖಾಸಗಿ ಒಡೆತನದ ಜಾಗವೋ ಅಥವಾ ಸರಕಾರಿ ಜಾಗವೋ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಶಾಸಕರು ಸರ್ವೆ ಇಲಾಖೆಗೆ ಮತ್ತು ನಗರಸಭೆ ಅಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ. ಶಾಸಕರ ಸೂಚನೆಯಂತೆ ವಿವಾದಿತ ಜಾಗವನ್ನು ಸರ್ವೆ ನಡೆಸಲಾಗುತ್ತದೆ.