ಸ್ಕೂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಡರಾತ್ರಿ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಮಂಗಳಪೇಟೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಾಪು ನಿವಾಸಿ ಪ್ರತೀಶ್ ಪ್ರಸಾದ್ (21) ಎಂದು ಗುರುತಿಸಲಾಗಿದೆ. ಸಹ ಸವಾರ ನಿಹಾಲ್ ವಿಲ್ಸನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಿತೇಶ್ ಶೆಟ್ಟಿ ಅವರು ನೀಡಿದ ದೂರಿನ ಪ್ರಕಾರ, ಕಾಪುದಿಂದ ಪಡುಬಿದ್ರಿಯ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಇಬ್ಬರೂ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಪ್ರತೀಶ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತ ಪ್ರತೀಶ್ ಪ್ರಸಾದ್, ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತಪ್ರಸಾದ್ ಮತ್ತು ಉಷಾ ಭಕ್ತಪ್ರಸಾದ್ ದಂಪತಿ ಪುತ್ರ.ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.