ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೇರಿ ನಿವಾಸಿ ರಾಜೇಶ್ ಪಾಲಿಗೆ ಒಂದು ಪುಟ್ಟ ಮೀನು ವಿಲನ್ ಆಗಿದೆ. ಫೆಬ್ರವರಿ ಮೊದಲ ವಾರ ಮನೆಯಲ್ಲಿ ಮೀನಿನ ಸಾರು ಮಾಡುವ ಸಂಭ್ರಮದಲ್ಲಿದ್ರು. ಒಂದಷ್ಟು ಮೀನು ಹಿಡಿದು ತಂದು ಅಡುಗೆಗೂ ಮುನ್ನ ಶುಚಿಗೊಳಿಸುವ ಕೆಲಸದಲ್ಲಿದ್ರು. ಈ ವೇಳೆ 70 ಗ್ರಾಮ್ ತೂಕದ ಪುಟ್ಟ ಮೀನು ರಾಜೇಶ್ ಬಲಗೈ ಬೆರಳನ್ನು ಕಚ್ಚಿತ್ತು. ಆ ಬಳಿಕ ರಾಜೇಶ್ ಅಕ್ಷರಶಃ ನರಕವನ್ನೇ ಅನುಭವಿಸಬೇಕಾಯ್ತು.
ಮೀನು ಕಚ್ಚಿದ್ರೆ ಏನಾಗುತ್ತದೆ ಅನ್ನೋ ಬೇಜವಾಬ್ದಾರಿಯಿಂದ ರಾಜೇಶ್ ಸುಮ್ಮನಿದ್ರು. ಆದರೆ, ಕೆಲವೇ ದಿನಗಳಲ್ಲಿ ಬಲಗೈ ಊದಿಕೊಳ್ಳಲಾರಂಭಿಸಿತು. ಅಂಗೈ ಮೇಲೆ ಸಣ್ಣ, ಸಣ್ಣ ಗುಳ್ಳೆಗಳು ಕಾಣಿಸಿಕೊಂಡವು. ವಿಪರೀತ ನೋವು ಶುರುವಾಗಿತ್ತು. ಕೂಡಲೇ ಸನಿಹದ ಕೊಡಿಯೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ರು.
ಅಲ್ಲಿ ವೈದ್ಯರು ಕೊಟ್ಟಿದ್ದ ಮಾತ್ರೆ ನುಂಗಿದ್ರೂ ಯಾವುದೇ ಪ್ರಯೋಜನ ಆಗಲಿಲ್ಲ. ಅಲ್ಲಿಂದ ನೇರವಾಗಿ ಮಾಹೆ ಆಸ್ಪತ್ರೆಯಲ್ಲಿ ದಾಖಲಾಗಿದ್ರು. ಅಲ್ಲಿನ ವೈದ್ಯಯೂ ಗಾಯ ಗುಣಪಡಿಸಲಿಲ್ಲ. ಕೋಯಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ದಾಖಲಾದ್ರು. ಗ್ಯಾಸ್ ಗ್ಯಾಂಗ್ರೀನ್ ಅನ್ನೋ ಮಾರಣಾಂತಿಕ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗಿದೆ ಅಂತ ವೈದ್ಯರು ಹೇಳಿದಾಗಲೇ ರಾಜೇಶ್ ಬೆಚ್ಚಿಬಿದ್ದಿದ್ದು.
ಹೆಟೆರೊಪ್ನ್ಯೂಸ್ಟೆಸ್ ಫಾಸಿಲಿಸ್ ಅನ್ನೋ ವೈಜ್ಞಾನಿಕ ಹೆಸರಿನ ಮೀನು ರಾಜೇಶ್ ಅವರ ಬಲಗೈಯನ್ನೇ ನುಂಗಿ ಹಾಕಿದೆ. ಸ್ಥಳೀಯವಾಗಿ ಕುಡು ಮೀನು ಅಂತ ಕರೆಸಿಕೊಳ್ಳುವ ಈ ಕೋರೆ ಮೀಸೆಯಂಥಾ ರೆಕ್ಕೆ ಹೊಂದಿರೋ ಈ ಕುಡು ಮೀನು ಬಲು ಅಪಾಯಕಾರಿ. ತನ್ನ ಬೆನ್ನೆಲುಬಿನಲ್ಲೇ ವಿಷ ಗ್ರಂಥಿಗಳಿರುತ್ತವೆ. ಇವು ಚೇಳಿನಂತೆಯೇ ಕುಟುಕುತ್ತವೆ.
ಈ ಸಂದರ್ಭ ಯಾಮಾರಿದ್ರೆ ಹೀಗೆ ಗ್ಯಾಸ್ ಗ್ಯಾಂಗ್ರೀನ್ ಇನ್ಫೆಕ್ಷನ್ ಆಗೋ ಸಾಧ್ಯತೆ ಇರುತ್ತದೆ. ರಾಜೇಶ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮೊದಲಿಗೆ ಎಡಗೈನ ಎಲ್ಲಾ ಬೆರಳನ್ನು ಕತ್ತರಿಸಿ ನೋಡಿದ್ರು ಗುಣವಾಗಲಿಲ್ಲ. ಕೊನೆಗೆ ಇಡೀ ದೇಹವನ್ನೇ ಗ್ಯಾಸ್ ಗ್ಯಾಂಗ್ರೀನ್ ವ್ಯಾಪಿಸಬಹುದು ಅಂತ ಎಡಗೈಯನ್ನೇ ಕತ್ತರಿಸಿದ್ದಾರೆ. ಸದ್ಯ, ಮರು ಹುಟ್ಟು ಪಡೆದಿರೋ ರಾಜೇಶ್ ಕುಡು ಮೀನಿನ ಕೆಟ್ಟ ಕನಸಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

























