ಪಟ್ಟೆ ಬಡಗನ್ನೂರು: ಪಟ್ಟೆ ವಿದ್ಯಾ ಸಮಿತಿ (ರಿ) ಇಂದ ನಡೆಸಲ್ಪಡುವ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ ಶ್ರೀ ಕೃಷ್ಣ ವಿದ್ಯಾ ಸಮಿತಿ (ರಿ) ಇಂದ ನಡೆಸಲ್ಪಡುವ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆ ಇದರ ಆಡಳಿತ ಹಸ್ತಾಂತರ ಕಾರ್ಯಕ್ರಮವು ದಿನಾಂಕ 19/03/2025 ರಂದು ಪೂರ್ವಾಹ್ನ 11 ಗಂಟೆಗೆ ಪಟ್ಟೆ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಜರುಗಿತು. ಪಟ್ಟೆ ವಿದ್ಯಾ ಸಂಸ್ಥೆಗಳ ನೂತನ ಆಡಳಿತ ಮಂಡಳಿಯಾಗಿ ಪುತ್ತೂರಿನ ಖ್ಯಾತ ನಿರ್ಮಾಣ ಸಂಸ್ಥೆಯಾದ ದ್ವಾರಕಾ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಇವರು ಅಧಿಕಾರ ವಹಿಸಿಕೊಂಡರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ, ಸಭೆಯನ್ನು ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಭಟ್ ಪಟ್ಟೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ತದನಂತರ ವೇದಿಕೆಯ ಎಲ್ಲಾ ಗಣ್ಯರು ದೀಪ ಬೆಳಗಿಸಿ, ನೂತನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು.

ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಶ್ರೀಮತಿ ಕೆ ಶಂಕರಿ ಇವರು ಸಂಸ್ಥೆಯ ಕುರಿತು ಮಾತನಾಡಿ ಶುಭ ಹಾರೈಸಿದರು. ಬಳಿಕ ವಿದ್ಯಾ ಸಂಸ್ಥೆಗಳ ನೂತನ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ಇವರು ಮಾತನಾಡಿ, ದ್ವಾರಕಾ ಸಂಸ್ಥೆಯ ಧ್ಯೇಯೋದ್ದೇಶಗಳು ಹಾಗೂ ಶೈಕ್ಷಣಿಕ ರೂಪುರೇಶೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಮಾತನಾಡಿ ಪಟ್ಟೆ ವಿದ್ಯಾಸಂಸ್ಥೆಗಳ ಹಿರಿಮೆಯನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ವಿದ್ಯಾಲಯವು ಶೈಕ್ಷಣಿಕವಾಗಿ ಇನ್ನಷ್ಟು ವಿಸ್ತಾರವನ್ನು ಕಾಣಲಿದೆ ಎಂದರು. ಈ ಸಂಸದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಆಡಳಿತ ಮಂಡಳಿಯ ಎಲ್ಲಾ ಸದಸ್ಯರನ್ನು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರನ್ನು ದ್ವಾರಕಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ, ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೇಣುಗೋಪಾಲ್ ಭಟ್ ಪಟ್ಟೆ, ಸಂಚಾಲಕರಾದ ಶ್ರೀ ನಾರಾಯಣ ಭಟ್ ಪಟ್ಟೆ ಹಾಗೂ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷರಾದ ಶ್ರೀ ಅಮೃತಕೃಷ್ಣ ಎನ್, ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಸದಸ್ಯರಾದ ಶ್ರೀ ಗಣರಾಜ ಕುಂಬ್ಳೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನೂತನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಅಶ್ವಿನಿ ಎನ್, ಶ್ರೀಮತಿ ಅಮೃತಾ ಎಸ್ ಶಾನ್‌ಭಾಗ್, ಶ್ರೀಯುತ ಪರಮೇಶ್ವರ ಭಟ್, ವೆಂಕಟಕೃಷ್ಣ ಶರ್ಮ ಹಾಗೂ ನಿಕಟ ಪೂರ್ವ ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು, ಸಂಸ್ಥೆಯ ಹಿತೈಷಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ರಾಜಗೋಪಾಲ್ ನಿರೂಪಿಸಿ, ಪ್ರತಿಭಾ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸುಮನ ವಂದಿಸಿದರು.