ಪುತ್ತೂರು : ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿಯ ಕಿನಾರೆಯ ಉಪ್ಪಿನಂಗಡಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರ ನೇತೃತ್ವದಲ್ಲಿ 39ನೇ ವರ್ಷದ ವಿಜಯ-ವಿಕ್ರಮ ಜೋಡುಕರೆಉಬಾರ್ ಕಂಬಳೋತ್ಸವ’ ಮಾರ್ಚ್ 22 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಅವರು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, 24 ಗಂಟೆಯ ಮಿತಿಯೊಳಗೆ ಈ ಬಾರಿ ಕಂಬಳೋತ್ಸವವನ್ನು ಮುಗಿಸುವ ಚಿಂತನೆ ಸಮಿತಿಗಿದೆ. ಈ ಬಾರಿ 150 ಜತೆ ಕೋಣಗಳು ಕಂಬಳ ಕೂಟದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು. ಕನೆ ಹಲಗೆ ವಿಭಾಗ ಹೊರತು ಪಡಿಸಿ ಉಳಿದ 5 ವಿಭಾಗಗಳಲ್ಲಿ ಸೆಮಿಫೈನಲ್ ಬಂದ ಕೋಣಗಳಿಗೂ ತೃತೀಯ ಹಾಗೂ ಚರ್ತುರ್ಥ ಬಹುಮಾನ ನೀಡುವ ಚಿಂತನೆ ನಡೆಸಲಾಗಿದೆ. ವಿಜೇತ ಕೋಣಗಳ ರಕ್ಷಕರಿಗೂ `ವಿಜಯರಕ್ಷಕ’ ಗೌರವ ನೀಡಲಾಗುವುದು ಎಂದು ಅವರು ತಿಳಿಸಿದರು.
ಉಬಾರ್ ಕಂಬಳೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಸಸ್ಯಮೇಳ, ಆಹಾರಮೇಳ, ಮಕ್ಕಳಿಗಾಗಿ ಜಾಯಿಂಟ್ ವೀಲ್, ಬೋಟಿಂಗ್ ಮತ್ತಿತರ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದವರು ಮಾಹಿತಿ ನೀಡಿದರು.
ಮಾರ್ಚ್ 22 ರಂದು ಬೆಳಿಗ್ಗೆ 10 ಗಂಟೆಗೆ ಕಂಬಳೋತ್ಸವಕ್ಕೆ ಜಾಲನೆ ದೊರೆಯಲಿದೆ. ಅದಕ್ಕೂ ಮೊದಲು ಕಂಬಳಕೋಣಗಳ ಮೆರವಣಿಗೆ ನಡೆಯಲಿದೆ. ಕಂಬಳಕೂಟದಲ್ಲಿ ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ವಿಭಾಗಗಳಿವೆ. ಪ್ರತೀ ವಿಭಾಗದ ಪ್ರಥಮ ಸ್ಥಾನಿ ವಿಜೇತ ಕೋಣಗಳಿಗೆ ಒಂದೂವರೆ ಪವನ್ ಚಿನ್ನ ಹಾಗೂ ದ್ವಿತೀಯ ಸ್ಥಾನಿ ವಿಜೇತ ಕೋಣಗಳಿಗೆ 1 ಪವನ್ ಚಿನ್ನ ಹಾಗೂ ವಿಜಯವಿಕ್ರಮ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದವರು ತಿಳಿಸಿದರು.
ಕಂಬಳ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ರೈ ಕೋಡಿಂಬಾಡಿ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮ ಸಂಜೆ 6 ಗಂಟೆಗೆ ನಡೆಯಲಿದ್ದು, ಸ್ಪೀಕರ್ ಯು.ಟಿ.ಖದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಇಂಧನ ಸಚಿವ ಕೆ.ಜೆ.ಜಾರ್ಜ್, ವಕ್ಫ್ ಸಚಿವ ಜಮೀರ್ ಅಹಮ್ಮದ್, ಯುವಜನ ಸಬಲೀಕರಣ ಸಚಿವ ನಾಗೇಂದ್ರ, ಸಂಸದ ಬ್ರಿಜೇಶ್ ಚೌಟ, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ ಮತ್ತು ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ಬಿ.ರಮಾನಾಥ ರೈ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಭಾಗಿಯಾಗಲಿದ್ದಾರೆ.
ಮಾರ್ಚ್ 23ರಂದು ಬಹುಮಾನ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ನಿವೃತ್ತ ಡಿಎಸ್‌ಎಫ್ ಚಂದಪ್ಪ ಮೂಲ್ಯ ಮುಂತಾದವರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕಂಬಳ ಸಮಿತಿಯ ಗೌವಾಧ್ಯಕ್ಷ ಎನ್.ಉಮೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಸಮಿತಿ ಪದಾದಿಕಾರಿಗಳಾದ ನಿರಂಜನ ರೈ ಮಠಂತಬೆಟ್ಟು ಮತ್ತು ಯೋಗೀಶ್ ಸಾಮಾನಿ ಇದ್ದರು.
ಕoಬಳೋತ್ಸವಕ್ಕೆ ನಟ-ನಟಿಯರ ಮೆರುಗು
ಉಬಾರ್ ಕಂಬಳೋತ್ಸವದಲ್ಲಿ ಕನ್ನಡ ಚಿತ್ರರಂಗದ ನಟಿಯರಾದ ರಚನಾ ರೈ, ಸಮಂತ ಅಮೀನ್, ಹರ್ಷಿತಾ ರಾಮಚಂದ್ರ, ನಟರಾದ ವಿನಿತ್ ಕುಮಾರ್, ಸುಜಿತ್ ಸುಪ್ರಭ, ಕಾಮಿಡಿ ಕಿಲಾಡಿಯ ಮನೀಶ್ ಶೆಟ್ಟಿ, ಹಿತೇಶ್ ಹಾಗೂ ತುಳು ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ನಟನಟಿಯರು ಭಾಗಿಯಾಗಲಿದ್ದಾರೆ.



























