ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪರಸ್ಪರ ಪ್ರೀತಿಸಿ ಇದೀಗ ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ಒಂದಾಗಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಪಸೀಹಾ ಕಳೆದ 2 ವರ್ಷಗಳಿಂದ ತನ್ನ ಮನೆ ಎದುರಿನ ಹಿಂದೂ ಯುವಕ 24 ವರ್ಷದ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು.
ವಾಟ್ಸಾಪ್ ಮೂಲಕ ಆರಂಭವಾಗಿ ಇವರ ಪ್ರೀತಿ, ಪ್ರೇಮ, ಪ್ರಣಯ ಕೊನೆಗೆ ಮದುವೆವರೆಗೂ ಬಂದಿದ್ದು, ಇದೀಗ ಅಂತಿಮವಾಗಿ ಜಾತಿ, ಧರ್ಮ ಬದಿಗಿಟ್ಟು ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ಒಂದಾಗಿದ್ದಾರೆ.
ಎದುರು ಬದುರು ಮನೆಯವರಾದ ಪಸೀಹಾ ಹಾಗೂ ನಾಗಾರ್ಜುನ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ರು. ಆದ್ರೆ, ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಹೀಗಾಗಿ ಈ ಜೋಡಿ ಮನೆಬಿಟ್ಟು ಬಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋಗಿದ್ದರು. ಕೊನೆಗೆ ಇಬ್ಬರ ಪೋಷಕರು ಆಗಮಿಸಿ, ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೂ ಸಹ ಪಸೀಹಾ ಪ್ರೀತಿಸಿದವನ ಜೊತೆಯೇ ಬಾಳುವುದಾಗಿ ಹಠ ಹಿಡಿದು, ಕೊನೆಗೆ ನಾರ್ಗಾಜುನನ್ನು ವರಿಸಿದ್ದಾಳೆ.
ಇನ್ನು ಈ ಜೋಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆ ದೊಡ್ಡ ಹೈಡ್ರಾಮಾವೇ ನಡೆಯಿತು. ಪಸೀಹಾ ಹಾಗೂ ನಾಗಾರ್ಜುನ ಬಂಧು-ಬಳಗ, ಸಂಬಂಧಿಕರು ಚಿಕ್ಕಬಳ್ಳಾಪುರ ಪೊಲೀಸ್ ಠಾಣಗೆ ದೌಡಾಯಿಸಿ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಯುವತಿಯ ಪೋಷಕರು, ಇದನ್ನು ಇಲ್ಲಿಗೆ ಬಿಟ್ಟುಬಿಡು, ನಮ್ಮ ಜೊತೆ ಮನೆಗೆ ಬಾ ಎಂದು ಬೇಡಿಕೊಂಡಿದ್ದಾರೆ. ಪೋಷಕರು ಎಷ್ಟು ಬೇಡಿಕೊಂಡರೂ ಸಹ ಕ್ಯಾರೇ ಎನ್ನದ ಪಸೀಹಾ, ನಾಗಾರ್ಜುನನನ್ನು ಬಿಟ್ಟು ಬರುವುದಿಲ್ಲ. ಆತನನ್ನೇ ಮದುವೆಯಾಗುತ್ತೇನೆಂದು ಪಟ್ಟು ಹಿಡಿದಿದ್ದಾಳೆ.
ಕೊನೆಗೆ ಪಸೀಹಾ ತಂದೆ-ತಾಯಿ ಜೊತೆ ಹೋಗದೇ ಪ್ರಿಯಕರನ ಜೊತೆಯಲ್ಲೇ ಹೋಗಿದ್ದು, ದೇವಸ್ಥಾನವೊಂದರಲ್ಲಿ ಸತಿಪತಿಗಳಾಗಿ ಕಾಲಿಟ್ಟರು. ಇನ್ನು ಮದುವೆಗೆ ಹುಡುಗಿ ಪೋಷಕರ ವಿರೋಧ ವ್ಯಕ್ತವಾಗಿರುವ ಹಿನ್ನಲೆ ಸೂಕ್ತ ರಕ್ಷಣೆ ನೀಡುವಂತೆ ಈ ಜೋಡಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.