ಐಪಿಎಲ್ನಲ್ಲಿ ಈಗಾಗಲೇ 3 ಪಂದ್ಯ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ಮ್ಯಾಚ್ ಸೋತು ಅವಮಾನಕ್ಕೆ ಒಳಗಾಗಿದೆ. ತಂಡದಲ್ಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ಮುಖ್ಯ ಪಾತ್ರ ವಹಿಸುತ್ತದೆ. ಆದ್ರೆ ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಧೋನಿ 9ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಬಂದಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಚೆನ್ನೈ ತಂಡದ ಕೋಚ್ ಧೋನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, ಎಂ.ಎಸ್ ಧೋನಿಗೆ ಈಗ 43 ವರ್ಷ. ಅವರ ಫಿಟ್ನೆಸ್ ಮೊದಲಿನಂತೆ ಇಲ್ಲ. ಆದರೆ ತಂಡಕ್ಕಾಗಿ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಸ್ಥಾನ ನಿಗದಿ ಮಾಡಲಾಗುತ್ತಿದೆ. ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದಾದ ಮೇಲೆ ರಾಜಸ್ಥಾನದ ಜೊತೆ 7ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಿದ್ದರು. ಇದಕ್ಕೆ ತೀವ್ರ ಟೀಕೆಗಳು ಬಂದಿದ್ದಕ್ಕೆ ಇದನ್ನೆಲ್ಲ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.
ಎಂಎಸ್ ಧೋನಿ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ. ಕಷ್ಟ ಆಗಿದ್ದರೂ ಅವರು ತಂಡದಲ್ಲಿ ಚೆನ್ನಾಗಿಯೇ ಮುಂದೆ ಸಾಗುತ್ತಿದ್ದಾರೆ. ಆದ್ರೆ 10 ಓವರ್ಗಳಷ್ಟು ಬ್ಯಾಟಿಂಗ್ ಮಾಡಲು ಅವರಿಗೆ ಸಾಧ್ಯವಿಲ್ಲ. ಮೊದಲಿನಂತೆ ಆರೋಗ್ಯ ಇದ್ರೆ ಚೆನ್ನಾಗಿ ಬ್ಯಾಟಿಂಗ್ ಮಾಡಬಲ್ಲರು, ಅದು ಈಗ ಆಗಲ್ಲ. ಹೀಗಾಗಿ ಬ್ಯಾಟಿಂಗ್ನಲ್ಲಿ ಅವರ ಸ್ಥಾನ ಬದಲಾವಣೆ ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.
ಚೆನ್ನೈ ತಂಡಕ್ಕೆ ಧೋನಿಯೇ ಅಮೂಲ್ಯ. ಅವರ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈಗ ಅವರಿಗೆ 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ 13- 14 ಓವರ್ ಮುಗಿದ ಮೇಲೆ ಕ್ರೀಸ್ನಲ್ಲಿ ಯಾರಿದ್ದಾರೆ ಎಂದು ನೋಡಿ ಅವರನ್ನು ಬ್ಯಾಟಿಂಗ್ ಮಾಡಲು ಕಳಿಸಲಾಗುತ್ತದೆ ಎಂದು ಹೇಳಿದ್ದಾರೆ.