ನವದೆಹಲಿ: ಮಹಾ ಕುಂಭ ಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾಗೆ ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರ ಆರೋಪದ ಅಡಿ ಬಂಧಿಸಲಾಗಿದೆ.
ತನ್ನನ್ನು ಚಿತ್ರನಟಿ ಮಾಡುವುದಾಗಿ ಹೇಳಿ ಸನೋಜ್ ಸುಳ್ಳು ಭರವಸೆ ನೀಡಿ ಶೋಷಣೆ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ ಆರೋಪದ ಅಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
2020 ರಲ್ಲಿ ಝಾನ್ಸಿಯಲ್ಲಿ ವಾಸಿಸುತ್ತಿದ್ದಾಗ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡುತ್ತಿದ್ದೆ. ನನ್ನ ವಿಡಿಯೋ ನೋಡಿ ಸನೋಜ್ ಮಿಶ್ರ ಸಂಪರ್ಕಿಸಿದ್ದರು. ನಂತರ ನಾವು ನಿರಂತರ ಸಂಪರ್ಕದಲ್ಲಿದ್ದೆವು.
ಜೂನ್ 2021 ರಲ್ಲಿ ನಾನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇದ್ದೇನೆ. ಭೇಟಿಯಾಗಲು ಬಾ ಎಂದು ಕರೆದರು. ನಾನು ಬರಲು ನಿರಾಕರಿಸಿದಾಗ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.
ಬೆದರಿಕೆಗೆ ಹೆದರಿ ಮರುದಿನ ನಾನು ಅವರನ್ನು ಭೇಟಿಯಾಗಲು ಒಪ್ಪಿಕೊಂಡೆ. ಮಿಶ್ರಾ ಅವರು ರೆಸಾರ್ಟ್‌ಗೆ ಕರೆದೊಯ್ದು ಮಾದಕ ದ್ರವ್ಯ ನೀಡಿ ಹಲ್ಲೆ ನಡೆಸಿದರು. ಅಷ್ಟೇ ಅಲ್ಲದೇ ನನ್ನ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದರು. ಕರೆದಾಗ ಬರದೇ ಇದ್ದರೆ ವಿಡಿಯೋವನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದರು.
ಮಿಶ್ರಾ ಹಲವು ಬಾರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮದುವೆಯ ಸುಳ್ಳು ಭರವಸೆಗಳನ್ನು ನೀಡಿ ಸಿನಿಮಾಗಳಲ್ಲಿ ಪಾತ್ರಗಳನ್ನು ನೀಡುವುದಾಗಿ ಹೇಳಿದ್ದರು ಎಂದು ದೂರಿದ್ದಾಳೆ.
ಮಹಾ ಕುಂಭಮೇಳದ ಸಮಯದಲ್ಲಿ ಮೊನಾಲಿಸಾ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಲವು ದಿನಗಳ ನಂತರ ಸನೋಜ್ ಮಿಶ್ರಾ ʼದಿ ಡೈರಿ ಆಫ್ ಮಣಿಪುರʼ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಮೊನಾಲಿಸಾಗೆ ನಟನಾ ಪಾಠಗಳನ್ನು ನೀಡಲು ಪ್ರಾರಂಭಿಸಿದ್ದರು.
ಮಿಶ್ರಾ ಅವರು ಗಾಂಧಿಗಿರಿ, ರಾಮ್ ಕಿ ಜನ್ಮಭೂಮಿ, ಲಫಂಗೆ ನವಾಬ್, ಧರ್ಮ್ ಕೆ ಸೌದಾಗರ್ ಮತ್ತು ಕಾಶಿ ಟು ಕಾಶ್ಮೀರ್ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.