ಚಿಕ್ಕಮಗಳೂರು: ಸ್ಕೂಲ್ ಬಸ್ ಡ್ರೈವರ್ ಒಬ್ಬನ ಕೃತ್ಯ ಇಡೀ ಕಾಫಿನಾಡನ್ನೇ ಬೆಚ್ಚಿ ಬೀಳಿಸಿದೆ. ಕೌಟುಂಬಿಕ ಕಲಹ ಒಂದಿಡೀ ಕುಟುಂಬಕ್ಕೆ ಅಂತ್ಯ ಹಾಡಿದೆ.. ಮಗಳೇ ಜೀವ, ಜೀವನ ಎನ್ನುತ್ತಿದ್ದ ವ್ಯಕ್ತಿ ಆಕೆಯ ಪಾಲಿಗೂ ಮರಣ ಶಾಸನ ಬರೆದು, ತಾನೂ ಸಾವಿನ ಮನೆ ಸೇರಿದ್ದಾನೆ.
ಏನಿದು ಪ್ರಕರಣ..?
ಚಿಕ್ಕಮಗಳೂರಿನ ಮಾಗಲು ಗ್ರಾಮದ ರತ್ನಾಕರ್ ಎಂಬ ವ್ಯಕ್ತಿ, ‘ಪೂರ್ಣಪ್ರಜ್ಞಾ ಸ್ಕೂಲ್’ನ ಬಸ್ ಡ್ರೈವರ್ ಆಗಿದ್ದ. ಈತ ತನ್ನ ಪತ್ನಿ ಮಾಡಿದ ಅದೊಂದು ತಪ್ಪಿನಿಂದ ಮನುಷ್ಯತ್ವವನ್ನೇ ಮರೆತು ರಕ್ಕಸನಾಗಿ ವರ್ತಿಸಿದ್ದಾನೆ.
ತನ್ನ ಅತ್ತೆ, ನಾದಿನಿ ಹಾಗೂ ಮಗುವನ್ನೇ ಕೊಂದಿದ್ದಾನೆ. ಅಲ್ಲದೇ ಮೃತ ನಾದಿನಿ ಸಿಂಧು ಪತಿ ಅವಿನಾಶ್ ಕಾಲಿಗೂ ಗುಂಡೇಟು ಹೊಡೆದಿದ್ದಾನೆ. ಅತ್ತೆ ಜ್ಯೋತಿ, ನಾದಿನಿ ಸಿಂಧು, 7 ವರ್ಷದ ಮಗಳು ಖುಷಿಯನ್ನ ಕೊಂದಿರೋ ರತ್ನಾಕರ್ ಈ ಮೂವರನ್ನೂ ಹತ್ಯೆ ಮಾಡುವ ಮುನ್ನ ವಿಡಿಯೋ ಮಾಡಿದ್ದಾನೆ.
ನನ್ನ ಕುಟುಂಬದವರಿಗೆ ಯಾರಿಗೂ ಹೇಳದೇ ನಾನು ಈ ನಿರ್ಧಾರವನ್ನ ಮಾಡಿದ್ದೀನಿ. ನನ್ನ ಮನೆಯವರು ನನಗೆ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಕೊನೆಗೆ ಪಾಪುವೂ ಬೇಡ ಅಂತ ಬಿಟ್ಳು, ಆ ಮಗುವನ್ನೂ ನಾನು ನೋಡ್ಕೋತಿದ್ದೀನಿ.
ನನ್ನ ಜೀವನ ನನ್ನ ಮಗಳು, ನನ್ನ ಖುಷಿ, ಅವಳನ್ನ ಸ್ಕೂಲಲ್ಲಿ ಮಕ್ಕಳು ಕೇಳ್ತಾರೆ. ನಿಮ್ಮ ಅಮ್ಮ ಎಲ್ಲಿ, ಅಮ್ಮ ಎಲ್ಲಿ? ಅಂತ ಅವಳ ಫ್ರೆಂಡ್ಸ್ ಎಲ್ಲಾ ಕೇಳ್ತಾರೆ.. ಅವಳು ನನಗೆ ಗೊತ್ತಿಲ್ಲದೇ ಅಲ್ಬಮ್ನ ಪೋಟೋ ತೆಗೆದುಕೊಂಡು ಶಾಲೆಗೆ ಹೋಗಿ ಎಲ್ಲರಿಗೂ ಇವರೇ ನನ್ನ ಅಮ್ಮ ತೋರಿಸಿದ್ದಾಳೆ.
ನನ್ನ ಮಗಳು ತುಂಬಾ ಬೇಜಾರು ಮಾಡ್ಕೊಂಡಿದ್ಲು.. ಅಂತಾ ವಿಡಿಯೋದಲ್ಲಿ ಹೇಳಿದ್ದಾನೆ.
ಅತ್ತೆ, ನಾದಿನಿ ಹಾಗೂ ಮಗುವನ್ನ ಕೊಂದು ಎಸ್ಕೇಪ್ ಆಗಿದ್ದ ಆರೋಪಿ ರತ್ನಾಕರ್ ತಾನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ಮಾಡುವ ವೇಳೆ ಗುಂಡಿನ ಸದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಆ ಸದ್ದು ಬಂದ ತೋಟದೊಳಗೆ ಹೋಗಿ ನೋಡಿದಾಗ.. ಗುಂಡು ಹಾರಿಸಿಕೊಂಡು ರತ್ನಾಕರ್ ಸೂಸೈಡ್ ಮಾಡ್ಕೊಂಡಿದ್ದಾನೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ನಲ್ಲಿ.. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ.. ಪತ್ನಿ ಮೇಲೆ ಅದ್ಯಾವ ಪರಿಯ ಕೋಪ ಇತ್ತೋ ಗೊತ್ತಿಲ್ಲ… ರತ್ನಾಕರ್ ಇಂತಹ ಕೃತ್ಯ ಎಸಗಿದ್ದಾನೆ.. ಸದ್ಯಕ್ಕೆ ರತ್ನಾಕರ್ ಪತ್ನಿ ಎಲ್ಲಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ.. ಇಷ್ಟೆಲ್ಲಾ ಮಾಡಿ ತಾನೂ ಸಾವಿನ ಮನೆ ಕದ ತಟ್ಟಿರೋ ರತ್ನಾಕರ್ ಸಾಧಿಸಿದ್ದಾದ್ರೂ ಏನು ಅನ್ನೋದೆ ಸದ್ಯದ ಪ್ರಶ್ನೆ.