ಕಲಬುರಗಿ: ಭೀಕರ ರಸ್ತೆ ಅಪಘಾತದಲ್ಲಿ ಐವರು ಭಕ್ತರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ನೆಲೋಗಿ ಕ್ರಾಸ್ ಬಳಿ ನಡೆದಿದೆ. ಮೃತ ಐವರು ಬಾಗಲಕೋಟೆ ನಿವಾಸಿಗಳು ಎಂದು ತಿಳಿದು ಬಂದಿದೆ. ಮೃತರ ಹೆಸರು ಇನ್ನೂ ಪತ್ತೆಯಾಗಿಲ್ಲ.
ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಾಗಲಕೋಟೆಯಿಂದ ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಆಗಮಿಸುತ್ತಿದ್ದರು. ಆದರೆ ಇದೇ ವೇಳೆ ನಿಂತ ಲಾರಿಗೆ ಹಿಂದಿನಿಂದ ಬಂದ ಟಿಟಿ ವಾಹನ ಡಿಕ್ಕಿ ಹೊಡೆದಿದೆ.
15ಕ್ಕೂ ಹೆಚ್ಚು ಭಕ್ತರಿದ್ದ ಟಿಟಿ ವಾಹನ ಏಕಾಏಕಿ ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ 4 ಭಕ್ತರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಇನ್ನೊಬ್ಬರು ಕಲಬುರಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇನ್ನೂ, ಈ ಅಪಘಾತದಲ್ಲಿ ಗಾಯಗೊಂಡ ಹಲವರನ್ನು ಕಲಬುರಗಿ ಹಾಗೂ ಜೇವರ್ಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಜೇವರ್ಗಿ ಹಾಗೂ ನೆಲೋಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.