ಬೆಂಗಳೂರು: ಕಾಂತಾರ ಚಾಪ್ಟರ್-1 ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಆದ್ರೆ ದೈವಾರಾಧನೆಯ ಎಳೆ ಹಿಡಿದು ನಿರ್ಮಿಸಿದ ಕಾಂತಾರ ಚಿತ್ರದ ವಿರುದ್ಧ ಇದೀಗ ದೈವಾರಾಧಕರೇ ಸಿಡಿದೆದ್ದಿದ್ದಾರೆ. ದೈವಸ್ಥಾನದ ಮೆಟ್ಟಿಲಲ್ಲೇ ತೀರ್ಪಿಗಾಗಿ ದೈವಾರಾಧಕರು ದೈವದ ಮೊರೆ ಹೋಗಿದ್ದಾರೆ. ತುಳುನಾಡಿನಲ್ಲಿ ದೈವಾರಾಧಕರು ವರ್ಸೆಸ್ ಕಾಂತಾರ ಫೈಟ್ ತಾರಕಕ್ಕೇರಿದೆ.
ಈ ನಡುವೆ ಕಾಂತಾರ ಸಿನಿಮಾ ನೋಡಿದ ಬಳಿಕ ದೈವದ ಅನುಕರಣೆ ಮಾಡಿ ಹುಚ್ಚಾಟ ಮೆರೆದಿದ್ದ ವೆಂಕಟ್ ಎಂಬಾತ ಕ್ಷಮೆಯಾಚಿಸಿದ್ದಾನೆ. ವಿಡಿಯೋ ಮೂಲಕ ತುಳುನಾಡ ಜನತೆ ಹಾಗೂ ಕಾಂತಾರ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾನೆ ವೆಂಕಟ್.
ಘಟನೆ ಬಳಿಕ ಮಾನಸಿಕವಾಗಿ ನೊಂದಿದ್ದೇನೆ. ತುಳುನಾಡಿನ ಜನತೆಯಲ್ಲಿ ಕ್ಷಮೆ ಇರಲಿ. ಈ ರೀತಿ ಯಾರೂ ಮಾಡಬೇಡಿ, ನಾನು ನಿಮ್ಮವ ಅಂತ ಕ್ಷಮಿಸಿಬಿಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಹಾದಿಬೀದಿಯ ಪ್ರದರ್ಶನವನ್ನ ಕಾಂತಾರ ಪ್ರೇರೇಪಿಸಿದೆ
ತುಳುವರ ಆರಾಧ್ಯ ದೈವಗಳನ್ನ ಹಾದಿಬೀದಿಯಲ್ಲಿ ಪ್ರದರ್ಶನ ಮಾಡೋದನ್ನ ಕಾಂತಾರ ಚಿತ್ರವೇ ಪ್ರೇರೇಪಿಸಿದೆ ಅನ್ನೋ ವಿರೋಧ ವ್ಯಕ್ತವಾಗಿದೆ. ಕಾಂತಾರದಲ್ಲಿ ಪಂಜುರ್ಲಿ, ಗುಳಿಗ, ಪಿಲಿದೈವವನ್ನ ತೋರಿಸಿ ರಿಷಬ್ ಶೆಟ್ಟಿ ಮಾಡಿದ ದೈವ ನರ್ತನವನ್ನ ಸಿನಿಮಾ ಥಿಯೇಟರ್‌ನಲ್ಲಿ ವೇಷ ಹಾಕಿ ಕುಣಿಯುತ್ತಿದ್ದಾರೆ. ಸಿನಿಮಾ ಮಂದಿರ ಹಿಡಿದು ರಸ್ತೆ ಮಧ್ಯೆ ಬಂದು ದೈವ ನರ್ತನ ಮಾಡೋವರೆಗೂ ಬಂದು ತಲುಪಿದೆ.
ಪಿಲಿಚಂಡಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಸಿನಿಮಾ ಬಿಡುಗಡೆ ಬೆನ್ನಲ್ಲೇ ಅನೇಕರಿಂದ ದೈವಾರಾಧನೆಯ ಅನುಕರಣೆ, ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದಾರೆ. ಹೀಗಾಗಿ ತುಳುನಾಡಿದ ದೈವಾರಾಧಕರು, ದೈವ ನರ್ತಕರು ಕಾಂತಾರ ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಕಾಂತಾರದಲ್ಲಿ ದೈವಾರಾಧನೆಯ ಬಳಕೆ ಹಾಗೂ ಸಿನಿಮಾ ಬಿಡುಗಡೆಯ ಬಳಿಕ ಅನೇಕರು ವಿಕೃತಿ ಮೆರೆದಿರೋದ್ರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಪರ ವಿರೋಧ ಚರ್ಚೆಗಳು ಆಗುತ್ತಿದೆ. ಹೀಗಾಗಿ ಇಂದು ದೈವಾರಾಧಕರು ಹಾಗೂ ದೈವ ನರ್ತಕರು ದೈವ ಕ್ಷೇತ್ರದಲ್ಲೇ ಕಾಂತಾರ ಸಿನಿಮಾದ ವಿರುದ್ಧ ದೂರು ನೀಡಿದ್ದಾರೆ. ಮಂಗಳೂರು ಹೊರವಲಯದ ಬಜಪೆ ಸಮೀಪದ ಪೆರಾರ ಶ್ರೀ ಬ್ರಹ್ಮಬಲವಂಡಿ ಪಿಲಿಚಂಡಿ ದೈವಸ್ಥಾನದಲ್ಲಿ ದೈವ ನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.