ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಮೂರು ದಿನದ ಹಿಂದೆ ಧ್ವಂಸಗೊಂಡಿದ್ದ ಪೊಲೀಸ್ ತಾತ್ಕಾಲಿಕ ಶೆಡ್‌ಗೆ ಹೊಂದಿಕೊಂಡು ಖಾಸಗಿ ವ್ಯಕ್ತಿಯೋರ್ವರು ಹಾಕಿದ್ದ ಬೇಲಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಲೋಕೋಪಯೋಗಿ ಇಲಾಖೆಯಿಂದ
ಜು.2 ರಂದು ತೆರವುಗೊಳಿಸಲಾಗಿದೆ.
ಜೂ.29ರಂದು ಆತೂರು ಚೆಕ್ ಪಾಯಿಂಟ್‌ನಲ್ಲಿ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದ ಕಡಬ ಎಸ್.ಐ. ರುಕ್ಮ ನಾಯ್ಕ್ ರವರಿಗೆ ದಾಖಲೆ ತೋರಿಸಿ ರಸ್ತೆ ದಾಟುತ್ತಿದ್ದ ಆತೂರುಬೈಲು ನಿವಾಸಿ ಹಾರೀಸ್ (35ವ.)ಎಂಬವರಿಗೆ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಅವರು ಮೃತಪಟ್ಟಿದ್ದರು.
ಈ ಘಟನೆಯ ನಂತರದ ಬೆಳವಣಿಗೆಯಲ್ಲಿ ಆಕ್ರೋಶಿತ ಯುವಕರ ಗುಂಪೊಂದು ಚೆಕ್ ಪಾಯಿಂಟ್ ಬಳಿ ಪೊಲೀಸರಿಗೆ ತಂಗಲು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೆಡ್ ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಎರಡು ದಿನದ ನಂತರ ಧ್ವಂಸಗೊಂಡ ಜಾಗದಲ್ಲೇ ಸುಸಜ್ಜಿತ ಹಾಗೂ ಶಾಶ್ವತ ಶೆಡ್ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು ಅಡಿಪಾಯ ಸಹ ಹಾಕಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಈ ಹಿಂದೆ ಇದ್ದ ಪೊಲೀಸ್
ಶೆಡ್‌ಗೆ ಹೊಂದಿಕೊಂಡು ಪಕ್ಕದ ಜಮೀನಿನ ವ್ಯಕ್ತಿಯೋರ್ವರು ಹೆದ್ದಾರಿ ಬದಿ ಸುಮಾರು 100 ಮೀ.ನಷ್ಟು ಉದ್ದಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.
ಇದಕ್ಕೂ ಮೊದಲು ಕಡಬ ತಹಶೀಲ್ದಾರ್ ಅನಂತಶಂಕರ್ ರವರ ನೇತೃತ್ವದಲ್ಲಿ ಜಾಗದ ಸರ್ವೆ ನಡೆಸಲಾಯಿತು. ಈ ವೇಳೆ ರಸ್ತೆ ಮಾರ್ಜಿನ್ ಅತಿಕ್ರಮಿಸಿಕೊಂಡು ಬೇಲಿ ಹಾಕಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಜೆಸಿಬಿ ತರಿಸಿ ಬೇಲಿ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಕಡಬ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಗಿರಿ ಗೌಡ ಹಾಗೂ ಸಿಬ್ಬಂದಿಗಳು ಸರ್ವೆ ಕಾರ್ಯ ನಡೆಸಿದರು. ಕಡಬ ತಹಶೀಲ್ದಾರ್ ಅನಂತಶಂಕರ್, ಕಂದಾಯ ಇಲಾಖೆಯ ಶೇಷಾದ್ರಿ, ಹರೀಶ್ ರವರು ಸಹಕರಿಸಿದರು. ಬಳಿಕ ಲೋಕೋಪಯೋಗಿ ಇಲಾಖೆಯ ಎಇಇ
ರಾಜಾರಾಂ ಹಾಗೂ ಜೆಇ ಕಾನಿಷ್ಕರವರ ಮಾರ್ಗದರ್ಶನದಲ್ಲಿ ಬೇಲಿ ತೆರವು ಕಾರ್ಯ ಮಾಡಲಾಯಿತು. ಕಡಬ ಎಸ್‌ಐ ರುಕ್ಮ ನಾಯ್ಕ್ , ಎಎಸ್‌ಐ ಚಂದ್ರಶೇಖರ ಗೌಡ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಸುಸಜ್ಜಿತ ಶೆಡ್ ಗೆ ಅಡಿಪಾಯ :
ಜೂ.29ರಂದು ಧ್ವಂಸಗೊಂಡಿದ್ದ ತಾತ್ಕಾಲಿಕ ಶೆಡ್ ಇದ್ದ ಜಾಗದಲ್ಲಿಯೇ ಸುಸಜ್ಜಿತಪೊಲೀಸ್ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದುಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಸಹ ತೆಗೆಯಲಾಗಿದೆ. ಇದಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ರಸ್ತೆ ಮಾರ್ಜಿನ್‌ನಲ್ಲಿರುವ ಬೇಲಿ ತೆರವುಗೊಳಿಸುವಂತೆ ಕೋರಿ ಪೊಲೀಸ್ ಇಲಾಖೆಯಿಂದ ಕಂದಾಯ ಹಾಗೂ ಲೋಕೋಪಯೋಗಿಇಲಾಖೆಗೆ ಮನವಿ ಮಾಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಾಗದ ಸರ್ವೆ ಮಾಡಿ ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಹೆದ್ದಾರಿ ಬದಿಯ ತನಕ ಖಾಸಗಿಯವರು ಬೇಲಿ ನಿರ್ಮಿಸಿ ಜಾಗ ಅತಿಕ್ರಮಣಮಾಡಿರುವುದು ಸರ್ವೆ ನಡೆಸಿದ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬೇಲಿತೆರವು ಮಾಡಿದ್ದೇವೆ. ಮತ್ತೆ ಬೇಲಿ ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಲೋಕೋಪಯೋಗ ಇಲಾಖೆಯ ರಾಜಾರಾಂ ಎಇಇ ತಿಳಿಸಿದ್ದಾರೆ.