ಬೆಳ್ತಂಗಡಿ: ತನಗೆ ಮಗಳನ್ನು ಮದುವೆ ಮಾಡಿಕೊಡಿಸಲು ಒಪ್ಪದ ಯುವತಿಯ ತಂದೆಗೆ ಯುವಕನೋರ್ವ ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ನಡೆದಿದೆ.
ಕಡಬ ತಾಲೂಕು ಸುಬ್ರಮಣ್ಯ ಕೈಕಂಬ ನಿವಾಸಿ ದಿನೇಶ್ ಎನ್ನುವಾತ ಲಾಯಿಲ ಗ್ರಾಮದ ವಿವೇಕಾನಂದನಗರ ಸೋಮನಾಥ ಕುಲಾಲ್ ಅವರಿಗೆ ಹಲ್ಲೆ ನಡೆಸಿದ್ದಾನೆ.
ಆರೋಪಿ ಬೈಕಿನಲ್ಲಿ ವಿವೇಕಾನಂದ ನಗರದ ಸೋಮನಾಥ ಕುಲಾಲ್ ಅವರ ಮನೆಗೆ ಏಕಾಏಕಿ ನುಗ್ಗಿ ಸೋಮನಾಥ ಅವರ ಪತ್ನಿ ಮತ್ತು ಮಗಳಿಗೆ ನಿಂದಿಸಿದ್ದಾನೆ. ಆ ಬಳಿಕ ಮಗಳನ್ನು ಮದುವೆ ಮಾಡಿಕೊಡುವಂತೆ ಬೆದರಿಸಿದ್ದಾನೆ. ಬಳಿಕ ತಾನು ತಂದಿದ್ದ ಕತ್ತಿಯಿಂದ ಸೋಮನಾಥ ಅವರ ತಲೆಗೆ ಕಡಿಯಲು ಮುಂದಾದಾಗ ತಡೆಯುವ ವೇಳೆಗೆ ಎಡಗೈಗೆ ಗಾಯವಾಗಿದೆ.
ಗಲಾಟೆಯನ್ನು ಬಿಡಿಸಲು ಬಂದ ಪಕ್ಕದ ಮನೆಯ ಮಹೇಶ್ ಅವರ ಕೈಗೂ ಗಾಯವಾಗಿದೆ. ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು ಕೊಲೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.