ಪುತ್ತೂರು: ದರ್ಬೆ ಸುಬ್ರಹ್ಮಣ್ಯ ರಸ್ತೆಯ ಕೂರ್ನಡ್ಕದಿಂದ ಷಣ್ಮುಖ ದೇವಸ್ಥಾನದ ಬದಿಯಿಂದಾಗಿ ಗೊಲೆಕ್ಸ್ ಫ್ಯಾಕ್ಟರಿ ಮುಖಾಂತರ ಮುಂಡೂರಿಗೆ ಸಂಪರ್ಕಿಸುವ ರಸ್ತೆ ಕಲ್ಪಿಸಿಕೊಡುವಂತೆ ಕೆಮ್ಮಿಂಜೆ ಗ್ರಾಮದ ಗ್ರಾಮಸ್ಥರು ಹಾಗೂ ಮುಂಡೂರು ಗ್ರಾಮಸ್ಥರು ತಹಶೀಲ್ದಾರರಿಗೆ, ಪೌರಾಯುಕ್ತರಿಗೆ, ನಗರಸಭಾ ಅಧ್ಯಕ್ಷರಿಗೆ, ಎಸಿ ಹಾಗೂ ಶಾಸಕರಿಗೆ ಮನವಿಯನ್ನು ಸಲ್ಲಿಸಿದರು.
ದರ್ಬೆ ಸುಬ್ರಹ್ಮಣ್ಯ ರಸ್ತೆಯ ಕೂರ್ನಡ್ಕದಿಂದ ಷಣ್ಮುಖ ದೇವಸ್ಥಾನದ ಬದಿಯಿಂದಾಗಿ ಗೊಲೆಕ್ಸ್ ಫ್ಯಾಕ್ಟರಿ ಮುಖಾಂತರ ಮುಂಡೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಈಗಾಗಲೇ ಇದ್ದು, ಸದ್ರಿ ರಸ್ತೆಯು ಷಣ್ಮುಖ ದೇವಸ್ಥಾನದ
ಬಳಿಯಲ್ಲಿ ಕೇವಲ 100 ಮೀಟರ್ ಸ್ಥಳದಲ್ಲಿ ರಸ್ತೆ ಇಲ್ಲವಾಗಿರುತ್ತದೆ. ಸದ್ರಿ ಸ್ಥಳವು ಎಂ. ಜಗದೀಶ ಶೆಣೈ ಮತ್ತು ಎಂ. ವರದರಾಜ ಶೆಣೈ (ಬಿ.ದಯಾನಂದ ಶೆಣೈಯವರ ಮಕ್ಕಳು)ಯವರ ಹಕ್ಕಿಗೆ ಒಳಪಟ್ಟ ಸ.ನಂಬ್ರ: 76/6ಸಿ(ಪಿ1) ರಲ್ಲಿ ಬರುವುದಾಗಿದೆ . ಈಗಾಗಲೇ ಇಕ್ಕಡೆಗಳಲ್ಲಿ ರಸ್ತೆ ಅಭಿವೃದ್ಧಿಯಾಗಿದ್ದು ಕೇವಲ 100 ಮೀಟರ್ ಸ್ಥಳದಲ್ಲಿ ರಸ್ತೆ ಇಲ್ಲವಾದ ಕಾರಣ ಸುಮಾರು 200ಕ್ಕಿಂತಲೂ ಹೆಚ್ಚು ಮನೆಯವರು ತಮ್ಮ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸುತ್ತು ದಾರಿ ಮೂಲಕ ಹೋಗಬೇಕಾಗಿರುತ್ತದೆ. 100 ಮೀಟರ್ ಸ್ಥಳದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿದಲ್ಲಿ ಪುತ್ತೂರು ಪಟ್ಟಣದಿಂದ ಗೋಲೆಕ್ಸ್ ಫ್ಯಾಕ್ಟರಿ ಮೂಲಕ ಮುಂಡೂರು ಭಾಗಕ್ಕೆ ವಾಹನ ಹಾಗೂ ಜನ ಸಂಚಾರಕ್ಕೆ ಬಹಳಷ್ಟು ಹತ್ತಿರದ ಸಂಪರ್ಕ ರಸ್ತೆಯಾಗಿ ಬಹಳ ಪ್ರಯೋಜನವಾಗುತ್ತದೆ. ಆದ್ದರಿಂದ ತಾವುಗಳು ಈ ಬಗ್ಗೆ ಪರಿಶೀಲನೆ ಮಾಡಿ ತಕ್ಷಣ ಸದ್ರಿ 100 ಮೀಟರ್ ಸ್ಥಳದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಬಾಲಚಂದ್ರ ಮಮತಾ ರಂಜನ್, ಬಿಕೆ ದೇವಪ್ಪ ಗೌಡ,ವಿಶ್ವನಾಥ್ ನಾಯಕ್,ಮಹಾಬಲ ಭಟ್,ಪ್ರವೀಣ್ ಭಟ್ ಮತ್ತಿತರರು ಉಪಸ್ಥಿತರಿದ್ದರು.