ಪುತ್ತೂರು: ಯಡಿಯೂರಪ್ಪ ಅವರು ರಾಜಿನಾಮೆ ನೀಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆಯಾಗಬೇಕಿದೆ.ಈ ಹುದ್ದೆಗೆ ದ.ಕ.ಸಂಸದ ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.
ನಿನ್ನೆ ಇಡೀ ದಿನ ಮಂಗಳೂರಿನಲ್ಲಿಯೇ ಇದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ವೇಳೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ, ಬಳಿಕ ಸಂಜೆ ವೇಳೆಗೆ ದಿಢೀರ್ ಆಗಿ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಕುಂಜಾಡಿ ತರವಾಡು ಮನೆಗೆ ತೆರಳಿ ಕುಟುಂಬ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ತಾಯಿ ಸುಶೀಲಾವತಿ.ಎನ್.ಶೆಟ್ಟಿ ಕಾಲು ಮುಟ್ಟಿ ನಮಸ್ಕರಿಸಿ ಆರ್ಶೀವಾದ ಪಡೆದುಕೊಂಡು, ತುರ್ತು ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಯಡಿಯೂರಪ್ಪ ಅವರು ಸೋಮವಾರ ರಾಜೀನಾಮೆ ನೀಡಿದ ತರವಾಯ ನಳಿನ್ ಕುಮಾರ್ ಕಟೀಲ್ ಅವರಿಗೆ ವರಿಷ್ಟರಿಂದ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದು,. ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿರುವ ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮಾಧ್ಯಮಗಳಲ್ಲಿ ನಳಿನ್ ಕಟೀಲ್ ಅವರ ಹೆಸರು ಮುಖ್ಯಮಂತ್ರಿ ಪದವಿಗೆ ಓರ್ವ ಅಭ್ಯರ್ಥಿ ಎಂಬ ಬಗ್ಗೆ ಪ್ರಸ್ತಾಪ ಬರುತ್ತಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ನಳಿನ್ ಕಟೀಲ್, ಹೈ ಕಮಾಂಡ್ ಕೃಪೆ ಇದ್ದರೆ ಮುಖ್ಯಮಂತ್ರಿ ಆದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕಟೀಲು ಅವರ ಭಾವಚಿತ್ರವನ್ನೇ ಹಾಕಿ ಮುಂದಿನ ಸಿಎಂ ಅವರಿಗೆ ಅಭಿನಂದನೆಗಳು ಎನ್ನುವ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.