ಮಂಗಳೂರು, ಮೇ 12: ಮಂಗಳೂರು ನಗರದ ಮುಲ್ಕಿ ಪೊಲೀಸರು ಹೈಡ್ರೊವೀಡ್ ಗಾಂಜಾ ಮಾದಕ ದ್ರವ್ಯವನ್ನು ಅಕ್ರಮವಾಗಿ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಆರೋಪಿತೆಯನ್ನು ಬಂಧಿಸಿ, ಸುಮಾರು ₹35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿತೆಯನ್ನು ಸುಹಾನಾ (21) ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿಯಾಗಿದ್ದು, ಪ್ರಸ್ತುತ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ BCA ವಿದ್ಯಾರ್ಥಿನಿಯಾಗಿದ್ದಾರೆ.
ಮೇ 12ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತೆಯನ್ನು ವಶಕ್ಕೆ ಪಡೆದರು. ಆರೋಪಿತೆಯ ಬಳಿಯಿಂದ ಹೈಡ್ರೊವೀಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರೆ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿತೆ ಚೆನ್ನೈಯಿಂದ ಮಾದಕ ವಸ್ತು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 32/2026ರಡಿ NDPS ಕಾಯ್ದೆಯ 8(C) ಮತ್ತು 20(B) ಕಲಂಗಳಡಿ ಪ್ರಕರಣ ದಾಖಲಾಗಿದೆ. ಪಣಂಬೂರು ACP ತಂಡ ಹಾಗೂ ಮುಲ್ಕಿ ಠಾಣೆ ಪೊಲೀಸರು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದರು.
ಆರೋಪಿತೆಯ ವಿರುದ್ಧ ಈ ಹಿಂದೆ ಕೂಡ ಎರಡು NDPS ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.



























