ಪುತ್ತೂರು:ಮೆಸ್ಕಾಂ ಇಲಾಖೆಯ ಅಧಿಕಾರಿಯೊಬ್ಬರು ಖಾಸಗಿ ಸಂಸ್ಥೆಯೊಂದರ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿ, ಮೊಬೈಲ್ನಲ್ಲಿ ಚಿತ್ರೀಕರಣ ಮಾಡಲು ಪ್ರಯತ್ನಿಸಿದ್ದಲ್ಲದೆ. ಈ ವಿಚಾರವನ್ನು ಯಾರಲ್ಲಾದರೂ ಬಹಿರಂಗಪಡಿಸಿದರೆ ಕಳ್ಳತನದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನೀಡಲಾದ ದೂರಿನ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಳುವಾರಿನ ಇಲೆಕ್ಟಿಕಲ್ ಸಂಸ್ಥೆಯಲ್ಲಿ ಕಚೇರಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ನೀಡಿದ ದೂರಿನ ಆಧಾರದಲ್ಲಿ, ಮೆಸ್ಕಾಂ ಇಲಾಖೆಯ ಪುತ್ತೂರು ಉಪವಿಭಾಗದ ಸಿಬ್ಬಂದಿ ದುರ್ಗಾಸಿಂಗ್ ಎಂಬವರ ವಿರುದ್ದ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 127(2), 75(2) ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳ ಪರಿಶೀಲನೆ ನೆಪದಲ್ಲಿ ಕಾರಿನಲ್ಲಿ ಕರೆದೊಯ್ದ ಆರೋಪ: ‘ಅ.16ರಂದು ಪರಿಚಯದ ವ್ಯಕ್ತಿಯೊಬ್ಬರ ಮನೆಗೆ ವಿದ್ಯುತ್ ಸಂಪರ್ಕದ ಪರವಾನಗಿ ಪಡೆಯುವ ಸಂಬಂಧದ ಕೆಲಸದ ನಿಮಿತ್ತ ಮೆಸ್ಕಾಂ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಶಾಖಾಧಿಕಾರಿಗಳು ದುರ್ಗಾಸಿಂಗ್ ಅವರನ್ನು ಸ್ಥಳ ಪರಿಶೀಲನೆಗೆ ತೆರಳುವಂತೆ ಸೂಚಿಸಿದ್ದರು. ತಾನು ಆಟೋರಿಕ್ಷಾದಲ್ಲಿ ಬರುವುದಾಗಿ ತಿಳಿಸಿದಾಗ, ದುರ್ಗಾಸಿಂಗ್ ತನ್ನ ಕಾರಿನಲ್ಲಿಯೇ ಬರುವಂತೆ ಹೇಳಿ ಪುತ್ತೂರಿನ ಕಿಲ್ಲೆ ಮೈದಾನದಿಂದ ಜಿಡೆಕಲ್ಲಿನಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ವಾಪಸ್ ಬರುವ ವೇಳೆ, ಮೊಬೈಲ್ ಫೋನ್ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿ ಸಾಮೆತ್ತಡ್ಕದಲ್ಲಿರುವ ಅವರ ವಸತಿಗೃಹಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾರೆ.
ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಅಥವಾ ಹೊರಗೆ ಬಹಿರಂಗಪಡಿಸಿದರೆ, ಉಂಗುರ ಕದ್ದಿರುವುದಾಗಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಹಾಗೂ ತಾನು ತೆಗೆದಿರುವ ಫೊಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಈ ವಿಚಾರವನ್ನು ಇಲಾಖೆಯ ಸಿಬ್ಬಂದಿ ಹಾಗೂ ಇತರರ ಬಳಿ ಹೇಳಿಕೊಂಡು ತನ್ನ ಮಾನಹಾನಿಗೆ ಪ್ರಯತ್ನಿಸಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ನ.23ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಮಹಾಲಿಂಗೇಶ್ವರ ದೇವಳದ ರಸ್ತೆ ಬದಿಯಲ್ಲಿದ್ದಾಗ ದುರ್ಗಾಸಿಂಗ್ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ತಮ್ಮನ್ನು ದುರುಗುಟ್ಟಿ ನೋಡಿಕೊಂಡು ಹೋಗಿದ್ದಾರೆ. ಆರೋಪಿಯು ಹಣ ಮತ್ತು ರಾಜಕೀಯ ಪ್ರಭಾವ ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ತಮಗೆ ತೊಂದರೆಯಾಗಬಹುದು ಎಂಬ ಆತಂಕವಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನ.24ರಂದು ರಾತ್ರಿ 7.15ಕ್ಕೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಆಕೆ ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸಭೆಯಲ್ಲಿ ಪ್ರಸ್ತಾಪವಾಗಿತ್ತು: ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗಕ್ಕೆ ಸಂಬಂಧಿಸಿ ನ.5ರಂದು ಪುತ್ತೂರಿನಲ್ಲಿ ನಡೆದಿದ್ದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ, ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ಮೆಸ್ಕಾಂ ಅಧಿಕಾರಿಯೊಬ್ಬರು ದೌರ್ಜನ್ಯ ಎಸಗಿದ್ದು, ಇದನ್ನು ಮುಚ್ಚಿಹಾಕುವ ಯತ್ನ ನಡೆದಿದೆ ಎಂಬ ಆರೋಪ ವ್ಯಕ್ತವಾಗಿತ್ತು.

























