ಸವಣೂರು : ಬೆಳೆದು ನಿಂತ ಮೂವರು ಹೆಣ್ಣು ಮಕ್ಕಳೊಂದಿಗೆ ಇಂದೋ ನಾಳೆಯೋ ಕುಸಿದು ಬೀಳುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ವಿಧವೆ ಮಹಿಳೆಯೋರ್ವರಿಗೆ ಕಟ್ಟೋಣ ಬಾಳಿಗೊಂದು ಸೂರು ತಂಡದಿಂದ ಸುಸಜ್ಜಿತ ಮನೆ ನಿರ್ಮಿಸುವ ಮೂಲಕ ಬದುಕಿಗೆ ಭರವಸೆಯ ಬೆಳಕಾಗಿದ್ದಾರೆ.ಆ ಮನೆ ನ.25ರಂದು ಗೃಹಪ್ರವೇಶ ಮೂಲಕ ಹಸ್ತಾಂತರ ನಡೆಯಲಿದೆ.
ಇದು ಈ ತಂಡದಿಂದ ಮಾಡುತ್ತಿರುವ ನಾಲ್ಕನೇ ಯೋಜನೆಯಾಗಿದೆ.ಮೊದಲ ಯೋಜನೆ ಪಾಲ್ತಾಡಿ ಗ್ರಾಮದ ಸುಂದರಿ ಎಂಬ ಮಹಿಳೆಗೆ ಕೊಟ್ಟಿಗೆ,ಬಾವಿ ಸಹಿತ ಸುಸಜ್ಜಿತ ಮನೆ,ಎರಡನೇ ಯೋಜನೆಯಾಗಿ ಕೋರಿಕ್ಕಾರು ನಿವಾಸಿ ಸೀತಾ ಹುಕ್ರ ಅವರ ಮನೆ ರಿಪೇರಿ,ಮೂರನೇ ಯೋಜನೆಯಾಗಿ ಅಂಗವಿಕಲ ತಂಗಿಯೊಂದಿಗೆ ಜೀವನ ಸಾಗಿಸುತ್ತಿರುವ ಪಾಲ್ತಾಡಿಯ ಮಂಜುನಾಥನಗರದ ಗಿರಿಜಾ ರೈ ಅವರಿಗೆ ಸುಸಜ್ಜಿತ ಮನೆ ನಿರ್ಮಾಣ, ಇದೀಗ ಪಾಲ್ತಾಡಿ ಗ್ರಾಮದ ಚೆನ್ನಾವರದ ಲಲಿತಾ ಎಂಬವರಿಗೆ ನೂತನ ಮನೆ ನಿರ್ಮಾಣ ಕಾರ್ಯ ಮಾಡಿ ನ.25ರಂದು ಗೃಹಪ್ರವೇಶದೊಂದಿಗೆ ಹಸ್ತಾಂತರ ನಡೆಯಲಿದೆ.
ಏನಿದು ಕಟ್ಟೋಣ ಬಾಳಿಗೊಂದು ಸೂರು ತಂಡ
ಕೊರೊನಾ ಲಾಕ್ಡೌನ್ ಸಮಯದಲ್ಲಿ ಸೇವಾ ಭಾರತಿ ತಂಡದವರು ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಸಂಧರ್ಭದಲ್ಲಿ ಸುಂದರಿ ಎಂಬ ವಿಧವೆ ಮಹಿಳೆ ತನ್ನ ವೃದ್ದ ತಂದೆ ಹಾಗೂ ಮೂವರು ಪುಟ್ಟ ಮಕ್ಕಳೊಂದಿಗೆ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾಗ ಅವರಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ದಾನಿಗಳನ್ನು ಹಾಗೂ ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ,ಚೆನ್ನಾವರ ಅಭ್ಯುದಯ ಯುವಕ ಮಂಡಲದವರನ್ನು ಸೇರಿಕೊಂಡು ರಚಿಸಿದ ವ್ಯಾಟ್ಸಾಪ್ ಗ್ರೂಪ್ ಈ ಕಟ್ಟೋಣ ಬಾಳಿಗೊಂದು ಸೂರು ತಂಡ.
ನಾಲ್ಕನೆ ಯೋಜನೆಯಾಗಿ ದಾನಿಗಳ ನೆರವು ಹಾಗೂ ಶ್ರಮದಾನದ ಮೂಲಕ ಸುಮಾರು 4 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿ ಗೃಹಪ್ರವೇಶ ಮಾಡುವ ಮೂಲಕ ಮನೆ ಹಸ್ತಾಂತರವಾಗಲಿದೆ.
ಈ ತಂಡದಲ್ಲಿ ಸುಮಾರು 1,75,000 ನಗದು ಸಂಗ್ರಹ ಹಾಗೂ ಮನೆಗೆ ಬೇಕಾದ ಸಾಮಾಗ್ರಿ ಕೊಡುಗೆ ,ಸಂಘ ಸಂಸ್ಥೆಗಳ ಸದಸ್ಯರ ಸಹಕಾರ ,ಶ್ರಮದಾನ ಹೀಗೆ ಸುಮಾರು 4 ಲಕ್ಷ ರೂ ವೆಚ್ಚದ ಸುಸಜ್ಜಿತ ಮನೆ ನಿರ್ಮಾಣವಾಗಿದೆ.
ಸವಣೂರು ಗ್ರಾಮ ಪಂಚಾಯತ್ನ ಪಾಲ್ತಾಡಿ ಗ್ರಾಮದ ಚೆನ್ನಾವರ ನಿವಾಸಿ ಲಲಿತಾ ಅವರು ಬೆಳೆದು ನಿಂತ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಮಣ್ಣಿನ ಗೋಡೆಯ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ಇದ್ದ ಮನೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿತ್ತು.ಇದು ಸಂಪೂರ್ಣವಾಗಿ ಧರಶಾಹಿಯಾಗುವ ಹಂತದಲ್ಲಿದ್ದಾಗ ತಂಡದ ಮೂಲಕ ತೆರವು ಮಾಡುವ ಕೆಲಸ ಮಾಡಲಾಯಿತು. ದಾಸ್ತಾನಿನಂತಿರುವ ಸಣ್ಣ ಮನೆ, ಅಡುಗೆ ಕೋಣೆಯಿಂದ ಹಿಡಿದು ಎಲ್ಲವೂ ಅದರಲ್ಲಿಯೇ ನಡೆಯಬೇಕು.
ಮಳೆ ಬಂದರೆ ಸೋರುವ ಮೇಲ್ಛಾವಣಿ, ಭದ್ರತೆ ಇಲ್ಲವೇ ಇಲ್ಲ ಇಂತಹ ಅಸಹಾಯಕ ಸ್ಥಿತಿಯಲ್ಲಿಯೇ ಲಲಿತಾ ಹಾಗೂ ಅವರ ಮಕ್ಕಳು ಅವರ ಜೀವನ ಕಳೆಯುತ್ತಿದ್ದರು.
ಈ ಸಂದರ್ಭದಲ್ಲಿ ಕಟ್ಟೋಣ ಬಾಳಿಗೊಂದು ಸೂರು ತಂಡದ ಸಂಯೋಜಕಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಅವರು ನೂತನ ಮನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ದಾನಿಗಳನ್ನು ಸಂಪರ್ಕಿಸಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಲಾಯಿತು.ಇವರಿಗೆ ಬೆಂಬಲವಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೂ.60,000 ,ಮಾಡಾವು ದೇವಿ ಇಲೆಕ್ಟ್ರಿಕಲ್ಸ್ನ ಸುಬ್ರಾಯ ಗೌಡ ಅವರು ಮನೆಗೆ ಸುಮಾರು 20,000 ವೆಚ್ಚದಲ್ಲಿ ವಿದ್ಯುತ್ ಸಂಪರ್ಕ,ವಯರಿಂಗ್,ನೀರಿನ ಪೈಪ್ ಅಳವಡಿಕೆ ಮಾಡಿದ್ದಾರೆ.ರೋಟರಾಕ್ಟ್ ಕ್ಲಬ್ ಕೆಯ್ಯೂರು 15,000 ನಗದು ಸಂಗ್ರಹಿಸಿಕೊಟ್ಟಿದ್ದಾರೆ.ಪುಟ್ಟಣ್ಣ ಗೌಡ ಅಂಕತಡ್ಕ ಅವರು ಜೆಸಿಬಿಯ ಕೆಲಸಗಳನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಿಕೊಟ್ಟಿದ್ದಾರೆ.
ಯುವಶಕ್ತಿ ಚೆನ್ನಾವರ ತಂಡ,ಅಭ್ಯುದಯ ಯುವಕ ಮಂಡಲ ,ವಿವೇಕಾನಂದ ಯುವಕ ಮಂಡಲ..ಹೀಗೆ ದಾನಿಗಳು ,ಸೇವಾಕಾರ್ಯಕರ್ತರ ಸಹಕಾರ,ಸಂಘ ಸಂಸ್ಥೆಗಳ ನೆರವಿನಿಂದ ಮನೆ ನಿರ್ಮಾಣಗೊಂಡಿದೆ.
























