ಪುತ್ತೂರು: ನಾನು ಶಾಸಕನಾದ ಮೇಲೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ 30 ಅಕ್ರಮ ಸಕ್ರಮ ಬೈಠಕ್ ಮಾಡಿ ಮೂರು ಸಾವಿರ ಕಡತ ವಿಲೇವಾರಿ ಮಾಡಿದ್ದೇನೆ,94 ಸಿ ,ಸಿಸಿ ಹಕ್ಕು ಪತ್ರ ಕೊಟ್ಟಿದ್ದೇನೆ ಆದರೆ ನನ್ನ ಪಕ್ಕದ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಬೈಠಕ್ ನಡೆದಿಲ್ಲ,ಹಕ್ಕು ಪತ್ರ ವಿತರಣೆ ನಡೆದಿಲ್ಲ ಯಾಕೆ? ಕೆಲಸ ಮಾಡದಿದ್ರು ಜನ ವೋಟು ಹಾಕುತ್ತಾರೆ ಎಂಬ ವಿಶ್ವಾಸ ಅವರಲ್ಲಿದೆ ಅದಕ್ಕೆ ಕಾರಣ ಅಲ್ಲಿನ ಜನತೆ. ಎಲ್ಲರೂ ಒಟ್ಟು ಸೇರಿ ಹಳೆ ಚಪ್ಪಲಿಹಿಡಿದುಕೊಂಡು ಶಾಸಕರ ಕಚೇರಿಗೆ ತೆರಳಿ ಪ್ರಶ್ನೆ ಮಾಡುವ ಮನೋಭಾವ ಸೃಷ್ಟಿಯಾದರೆ ನಿಮ್ಮ ಅಕ್ರಮ ಸಕ್ರಮ ಕ್ಕೆ ಏನಾದರೂ ಚಿಗುರು ಬರಬಹುದು ನೀವು ಸುಮ್ಮನೇ ಇದ್ದರೆ ನಿಮ್ಮ ಕಡತವನ್ನು ಅಧಿಕಾರಿಗಳು ಕ್ಲೋಸ್ಡ್ ಎಂದು ಬರೆದು ಅದಕ್ಕೊಂದು ಗತಿ ಕಾಣಿಸ್ತಾರೆ ಎಂದು ಶಾಸಕ ಅಶೋಕ್ ರೈ ಬೆಳ್ತಂಗಡಿ ಶಾಸಕ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.
ಅವರು ಬಡಗನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು. ನನ್ನ ಅಕ್ಕಪಕ್ಕದ ಕ್ಷೇತ್ರದ ಶಾಸಕರು ನನ್ನ ಹಾಗೆಯೇ,ನನ್ನಷ್ಟೆ ಪವರ್ ಆವರಿಗಿದೆ ಆದರೂ ಯಾಕೆ ಕೆಲಸ ಮಾಡುತ್ತಿಲ್ಲ? ಬೇರೆ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂದು ಇಣುಕಿ ನೋಡುವ ಬದಲು ತನ್ನ ಕ್ಷೇತ್ರದ ಜನರ ಕಷ್ಟವನ್ನೊಮ್ಮೆ ಅರಿಯಲಿ ಎಂದುಶಾಸಕರು ಹೇಳಿದರು.
ಕಾಂಗ್ರೆಸ್ ಸರಕಾರ,ಕಾಂಗ್ರೆಸ್ ಶಾಸಕರಿದ್ದ ಕಡೆ ಎಲ್ಲರ ಕೆಲಸಗಳೂ ಆಗ್ತದೆ ಆದರೆ ಬಿಜೆಪಿ ಶಾಸಕರಿದ್ದ ಕಡೆ ಬಿಜೆಪಿಯವರ ಕೆಲಸ ಮಾತ್ರ ಆಗ್ತದೆ ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ದ. ನನ್ನ ವಿರುದ್ದ ಧಿಕ್ಕಾರ ಕೂಗಿದವನ ಅಕ್ರಮ ಸಕ್ರಮವನ್ನು ನಾನು ಮಾಡಿಕೊಟ್ಟಿದ್ದೇನೆ, ನನ್ನ ಬಳಿ ಬಂದು ಅಕ್ರಮ ಸಕ್ರಮ ಮಾಡಿಸಿಕೊಂಡು ಹೋದವ ಪುತ್ತೂರು ಶಾಸಕರು ಏನೂ ಮಾಡಿಲ್ಲ ಎಂದು ಬ್ಯಾನರ್ ಹಿಡಿದು ರಸ್ತೆಯಲ್ಲಿ ಕೂತಿದ್ದ ಎಂದು ಶಾಸಕರು ವ್ಯಂಗ್ಯವಾಡಿದರು.
ವೇದಿಕೆಯಲ್ಲಿ ತಹಶಿಲ್ದಾರ್ ಕೂಡ್ಲಿಗಿ, ಅಕ್ರಮ ಸಕ್ರಮ ಸಮಿತಿಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಇದ್ದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಸ್ವಾಗತಿಸಿ ವಂದಿಸಿದರು.
























