ಪುತ್ತೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಬಸ್ ನಿರ್ವಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಅ.28ರಂದು ಮುಕ್ರಂಪಾಡಿ ಬಸ್ ನಿಲ್ದಾಣದ ಬಳಿ ನಡೆದಿರುವುದಾಗಿ ಪ್ರಕರಣ ದಾಖಲಾಗಿದೆ.
ಪುತ್ತೂರು ಕೆಎಸ್ಆರ್ಟಿಸಿ ಘಟಕದಲ್ಲಿ ಕಳೆದ ಒಂದು ವರ್ಷದಿಂದ ಬಸ್ಸಿನ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಶಂಕರ್ ಎಂಬವರು ಅ.28ರಂದು ಪುತ್ತೂರು ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಸುಳ್ಯಕ್ಕೆ ಕರೆದೊಯ್ಯುತ್ತಿದ್ದರು. ಸಂಜೆ ವೇಳೆಗೆ ಮುಕ್ರಂಪಾಡಿ ಬಸ್ ನಿಲ್ದಾಣ ತಲುಪಿದಾಗ ವ್ಯಕ್ತಿಯೊಬ್ಬ ಬಸ್ಸನ್ನು ಹತ್ತಿದ್ದಾನೆ. ಆತ ತೀವ್ರ ಅಮಲಿನಲ್ಲಿದ್ದು, ಬಸ್ಸಿನಲ್ಲಿದ್ದ ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರ ಮೇಲೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ನಿರ್ವಾಹಕರು ಆತನನ್ನು ಬಸ್ಸಿನ ಕೊನೆಯ ಸೀಟಿನಲ್ಲಿ ಕುಳ್ಳಿರಿಸಿದ್ದರು.ಬಳಿಕ ಟಿಕೆಟ್ ಕೇಳಿದಾಗ ನಿರ್ವಾಹಕರೊಂದಿಗೆ ವಾಗ್ವಾದ ನಡೆಸಿದ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ತುಳಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೂಡಲೇ ನಿರ್ವಾಹಕರು ಬಸ್ಸನ್ನು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಬಳಿ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರಿದ್ದ ಕಾರಣ ಅವರನ್ನು ಸುಳ್ಯ ಬಸ್ ನಿಲ್ದಾಣಕ್ಕೆ ತಲುಪಿಸಿದ ಬಳಿಕ ನಿರ್ವಾಹಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಆರೋಪಿಯನ್ನು ಸುಳ್ಯ ಜಾಲ್ಸೂರಿನ ರಾಜೇಶ್ ಅಲಿಯಾಸ್ ರಾಜು ಎಂದು ಗುರುತಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ನಿಂದಿಸಿ, ಪ್ರಯಾಣಿಕರಿಗೂ ತೊಂದರೆ ನೀಡಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ ಆರೋಪದಡಿ ನಿರ್ವಾಹಕ ಶಿವಶಂಕರ್ ಅವರು ದೂರು ನೀಡಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

























