ಕಡಬ: ಕಡಬದಿಂದ ನೂಜಿಬಾಳ್ತಿಲ ಗ್ರಾಮದ ಕುರಿಯಾಳಕೊಪ್ಪ ಎಂಬಲ್ಲಿಗೆ ಆಟೋ ಬಾಡಿಗೆ ಮಾಡಿಕೊಂಡು ಹೋಗಿದ್ದ ಹೊರರಾಜ್ಯದ ಕಾರ್ಮಿಕರು ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ವ್ಯಕ್ತವಾಗಿದೆ.
ಹಲ್ಲೆಗೊಳಗಾದ ಆಟೋ ಚಾಲಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಘಟನೆ ನ.4ರ ರಾತ್ರಿ ನಡೆದಿದೆ.
ಕಡಬದಲ್ಲಿ ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಕೃಷ್ಣ ಎಂಬವರು ಹಲ್ಲೆಗೊಳಗಾದವರು. ಹೊರರಾಜ್ಯದ ಕಾರ್ಮಿಕರು ಕಡಬದಿಂದ ನೂಜಿಬಾಳ್ತಿಲ ಮರಳು ರಾಂಪ್ ಇರುವ ಕುರಿಯಾಳಕೊಪ್ಪಕ್ಕೆ ಕೃಷ್ಣ ಅವರ ಆಟೋಬಾಡಿಗೆ ಮಾಡಿಕೊಂಡು ತೆರಳಿದ್ದರು. ಪ್ರಯಾಣ ಮುಗಿದ ಬಳಿಕ ತನಗೆ ಪೂರ್ತಿ ಬಾಡಿಗೆ ಹಣ ನೀಡದೆ, ತನ್ನ ಮೊಬೈಲ್ ಫೋನ್ ಹಾಗೂ ಹಣವನ್ನು ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಚಾಲಕ ಕೃಷ್ಣ ಆರೋಪಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಕೃಷ್ಣ ಅವರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಜಮಾಯಿಸಿದರು. ನದಿಯಿಂದ ಮರಳು ಸಂಗ್ರಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹೊರರಾಜ್ಯದ ಕಾರ್ಮಿಕರು ಈ ಕೃತ್ಯ ಎಸಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದರೆ ಹಲ್ಲೆ ನಡೆಸಿದವರು ಯಾರು, ಎಷ್ಟು ಮಂದಿ ಇದ್ದರು ಹಾಗೂ ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ.


























