ಸುಳ್ಯ: ಕಾರನ್ನು ನಿರ್ಲಕ್ಷ್ಯದಿಂದ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕಾರಿನ ಹಿಂಬದಿ ಸಿಲುಕಿದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನ.11ರಂದು ಸುಳ್ಯದಲ್ಲಿ ನಡೆದಿದೆ.
ಸುಳ್ಯ ಕಸಬ ನಿವಾಸಿ ಕಮಾಲುದ್ದೀನ್ ಅವರ ತಾಯಿ ಕಮರುನ್ನಿಸಾ (46) ಮೃತಪಟ್ಟವರು.
ನ.11ರಂದು ಬೆಳಿಗ್ಗೆ ಕಮರುನ್ನಿಸಾ ಅವರು ಕೆಲಸ ಮಾಡುತ್ತಿದ್ದ ಸ್ಥಳದಿಂದ ಸಂಬಂಧಿಕ ಮಹರೂಪ್ ಎಂಬವರು KA 04 MQ 1018 ನೋಂದಣಿಯ ಕಾರಿನಲ್ಲಿ ಮನೆಗೆ ಕರೆತಂದಿದ್ದರು. ಕಾರಿನಿಂದ ಇಳಿದ ಬಳಿಕ ಕಮರುನ್ನಿಸಾ ಅವರು ಕಾರಿನ ಹಿಂಭಾಗಕ್ಕೆ ಬಂದ ಸಂದರ್ಭದಲ್ಲಿ ಮಹರೂಪ್ ನಿರ್ಲಕ್ಷ್ಯದಿಂದ ಕಾರನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಈ ವೇಳೆ ಕಾರಿನ ಹಿಂಭಾಗಕ್ಕೆ ಸಿಲುಕಿದ ಕಮರುನ್ನಿಸಾ ಗಂಭೀರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 157/2026ರಂತೆ ಬಿಎನ್ಎಸ್ ಕಲಂ 106(1)ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
























