ಬೆಳ್ತಂಗಡಿ: ತಾಲೂಕಿನ ಕೊಯ್ಯರು ಗ್ರಾಮದ ಮಲೆಬೆಟ್ಟು ಬಳಿಯ ಪೊರ್ಕಂಡ ನಿವಾಸಿ ಕೃಷ್ಣಪ್ಪ ಗೌಡ ಅವರ ಪುತ್ರ ಲಿಕೇಶ್ ಗೌಡ (20) ಪಟಾಕಿ ಸ್ಫೋಟಗೊಂಡ ಪರಿಣಾಮ ಬಲಕಾಲಿಗೆ ಗಾಯಗೊಂಡ ಘಟನೆ ನ.9ರಂದು ಸಂಜೆ ನಡೆದಿದೆ.
ಮನೆಯ ಅಂಗಳದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ಮನೆಯವರು ಹೊರಬಂದ ಕಾರಣ, ಅವರನ್ನು ರಕ್ಷಿಸುವ ಉದ್ದೇಶದಿಂದ ಲಿಕೇಶ್ ಪಟಾಕಿಯ ಮೇಲೆ ಬಲಕಾಲಿಟ್ಟಿದ್ದಾರೆ. ಈ ವೇಳೆ ಪಟಾಕಿ ಸ್ಫೋಟಗೊಂಡು ಅವರ ಬಲಕಾಲಿಗೆ ಭಾಗಶಃ ಗಾಯವಾಗಿದೆ.
ತಕ್ಷಣ ಮನೆಯವರು ಹಾಗೂ ಸ್ನೇಹಿತರು ಸೇರಿ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಲಿಕೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


























