ಕಡಬ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿಅಂಕದ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದ ಘಟನೆ ನ.9ರಂದು ಸಂಜೆ ಕಡಬ ಚಾರ್ವಾಕ ಗ್ರಾಮದ ಬೀರೋಳಿಗೆಯಲ್ಲಿ ನಡೆದಿದೆ.
ಬೀರೋಳಿಗೆಯ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿಅಂಕದ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಪ್ರಭಾರ ಉಪನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.
ಈ ವೇಳೆ ಜೂಜಾಟದಲ್ಲಿ ತೊಡಗಿದ್ದವರು ಓಡಿಹೋಗಿದ್ದು, ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನ ಬಳಿ ಜೂಜಾಟದಿಂದ ಗಳಿಸಿದ 1,030 ರೂ. ನಗದು ಪತ್ತೆಯಾಗಿದೆ. ಅಲ್ಲದೆ, ಸ್ಥಳದಲ್ಲಿದ್ದ ಐದು ಅಂಕದ ಕೋಳಿಗಳು ಹಾಗೂ ಕೋಳಿಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

























