ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ, ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಅವರ ಕುಟುಂಬವು ತಮ್ಮ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರನ್ನು ಮನೆಗೆ ಆಹ್ವಾನಿಸಿ, ಲಘು ಉಪಹಾರ ನೀಡಿ ಹಬ್ಬದ ಸಂಭ್ರಮವನ್ನು ಅವರೊಂದಿಗೆ ಹಂಚಿಕೊಂಡಿತು.
ಸಮಾಜದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಅವರ ಪರಿಶ್ರಮವನ್ನು ಗುರುತಿಸಿ, ಗೌರವಿಸುವ ಸಣ್ಣ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ನಮ್ಮ ಮನೆ ಮತ್ತು ಪರಿಸರ ಸ್ವಚ್ಛವಾಗಿರಬೇಕು ಎಂದು ಬಯಸುವ ನಾವು, ಅದಕ್ಕಾಗಿ ಪ್ರತಿದಿನ ಶ್ರಮಿಸುವ ಪೌರಕಾರ್ಮಿಕರ ಸೇವೆಯನ್ನು ಎಂದಿಗೂ ಮರೆಯಬಾರದು. ದೀಪಾವಳಿ ಕೇವಲ ದೀಪ ಬೆಳಗಿಸುವ ಹಬ್ಬವಲ್ಲ, ನಮ್ಮ ಬದುಕಿನಲ್ಲಿ ಬೆಳಕು ತುಂಬುವವರನ್ನು ಗೌರವಿಸುವ ಸಂದರ್ಭವೂ ಹೌದು. ಅವರ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಮ್ಮ ಕುಟುಂಬದೊಂದಿಗೆ ಈ ಸಂತೋಷವನ್ನು ಹಂಚಿಕೊಂಡಿದ್ದೇವೆ. ಸಮಾಜಕ್ಕಾಗಿ ದುಡಿಯುವ ಪ್ರತಿಯೊಬ್ಬರಿಗೂ ಗೌರವ ಮತ್ತು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ನಂದನ್ ಮಲ್ಯ ಹೇಳಿದರು


























